ತದಡಿ: ಮೀನುಗಾರಿಕಾ ಬೋಟ್ ಸ್ವಚ್ಛಗೊಳಿಸುವಾಗ ಬೋಟ ನಲ್ಲಿದ್ದ ಕೊಳೆತ ಮೀನುಗಳಿಂದ ವಿಷಕಾರಿ ಅನಿಲ ಆವರಿಸಿ, ಉಸಿರುಗಟ್ಟಿ ಮೂವರು ಮೀನುಗಾರರು ದಾರುಣವಾಗಿ ಮೃತಪಟ್ಟ ಘಟನೆ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಸಂಭವಿಸಿದೆ. ದುರಂತದಲ್ಲಿ ಮತ್ತೊಬ್ಬ ಮೀನುಗಾರ ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ.
ಮೃತರನ್ನು ಕುಮಟಾ ತಾಲೂಕಿನ ಕಾಗಲ್ ಗ್ರಾಮದ ನೌಶಾದ್ ಅಲಿ ರಾಜಾ (35) ಓನಹಳ್ಳಿಯ ಅಮಾನ್ ಅಯೂಬ್ ಲಂಗಡು ಮತ್ತು ಉಂಚಳ್ಳಿಯ ಅಮೀರ್ ಅಬ್ದುಲ್ ಎಂದು ಗುರುತಿಸಲಾಗಿದೆ. ಇವರು ಕುಮಟಾ ತಾಲೂಕಿನ ವನಹಳ್ಳಿಯ ಖಾಸಿಂ ಎಂಬುವವರಿಗೆ ಸೇರಿದ 'ಖುಜೈನಾ' (Khuzaina) ಹೆಸರಿನ ಪರ್ಸ್ ಸೈನ್ (purse seine) ದೋಣಿಯೊಳಗೆ ಮಂಗಳವಾರ ಸಂಜೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಅವರು ಗೋವಾ ಕಡೆಗೆ ಹೋಗಿದ್ದಾಗ 'ಚಮನ್' (chaman) ಎಂಬ ಜಾತಿಯ ಮೀನುಗಳನ್ನು ಹಿಡಿದಿದ್ದರು. ಈ ಮೀನುಗಳು 24 ಗಂಟೆಗಳ ಒಳಗೆ ಹಾಳಾಗಿಬಿಡುತ್ತವೆ. ಮೀನುಗಳ ಪ್ರಮಾಣ ಹೆಚ್ಚಾಗಿತ್ತು. ಅಲ್ಲದೇ ತದಡಿ ಬಂದರಿಗೆ ಬರಲು ಒಂದು ದಿನ ತಡವಾಯಿತು. ಅಷ್ಟರಲ್ಲಾಗಲೇ ಹಿಡಿದಿದ್ದ ಎಲ್ಲಾ ಮೀನುಗಳು ಕೊಳೆತು ಹೋಗಿದ್ದವು ಎಂದು ಗೋಕರ್ಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಧರ್ ಎಸ್.ಆರ್. ತಿಳಿಸಿದ್ದಾರೆ.
ಬಂದರಿನಲ್ಲಿ ಬೋಟ್‌ನಲ್ಲಿದ್ದ ಮೀನುಗಳನ್ನು ಖಾಲಿ ಮಾಡಿದ ನಂತರ, ಮೀನು ಸಂಗ್ರಹಿಸುವ ಸ್ಟೋರೇಜ್ ಟ್ಯಾಂಕ್ (ಫಿಶ್ ಹೋಲ್ಡ್) ಸ್ವಚ್ಛಗೊಳಿಸಲು ಕೆಳಗಿಳಿದಿದ್ದಾರೆ. ಈ ವೇಳೆ, ಟ್ಯಾಂಕ್‌ನಲ್ಲಿದ್ದ ಕೊಳೆತ ಮೀನಿನ ತ್ಯಾಜ್ಯದಿಂದ ಉತ್ಪತ್ತಿಯಾಗಿದ್ದ ತೀವ್ರ ವಿಷಕಾರಿ ಅನಿಲ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದನ್ನು ಕಂಡ ಇತರ ನಾಲ್ವರು ಅವರನ್ನು ರಕ್ಷಿಸಲು ಒಳಗೆ ಹೋಗಿದ್ದಾರೆ. ಅವರು ಕೂಡಾ ತೀವ್ರವಾದ ದುರ್ವಾಸನೆ ಮತ್ತು ವಿಷಕಾರಿ ಅನಿಲ ತಡೆದುಕೊಳ್ಳಲಾರದೆ ಕೋಲ್ಡ್ ಸ್ಟೋರೇಜ್ ಟ್ಯಾಂಕ್‌ನಲ್ಲೇ ಕುಸಿದು ಬಿದಿದ್ದಾರೆ.
ಅಲ್ಲಿ ಸಿಲುಕಿಕೊಂಡಿದ್ದ ಮೀನುಗಾರರು, ಮೊದಲು ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯನ್ನು ಹೊರಗೆ ತರುವಲ್ಲಿ ಯಶಸ್ವಿಯಾದರಾದರೂ, ತಾವೇ ಸ್ವತಃ ಹೊರಬರಲು ಸಾಧ್ಯವಾಗಲಿಲ್ಲ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಗೋಕರ್ಣ ಪೊಲೀಸರು, ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಭಟ್ಕುಲಿಯ ಅಬ್ದುಲ್ (55) ಎಂಬುವವರು ಪ್ರಸ್ತುತ ಆಸ್ಪತ್ರೆಯಲ್ಲಿ ಪ್ರಾಣಾಪಾಯದೊಂದಿಗೆ ಹೋರಾಡುತ್ತಿದ್ದಾರೆ.
'ಚಮನ್' ಎಂಬ ಮೀನು ತಿನ್ನಲು ಯೋಗ್ಯವಲ್ಲ, ಆದ್ದರಿಂದ ಇದನ್ನು ಪುಡಿ ತಯಾರಿಸುವ ಕಾರ್ಖಾನೆಗೆ ಕಳುಹಿಸಲಾಗುತ್ತದೆ. ನಾವು ಈ ಮೀನುಗಳನ್ನು ಹಿಡಿದಾಗ, ಅವುಗಳನ್ನು ವಿಲೇವಾರಿ ಮಾಡುವಾಗ ಬಹಳ ಎಚ್ಚರಿಕೆ ವಹಿಸುತ್ತೇವೆ. ಇವರು ದೊಡ್ಡ ಪ್ರಮಾಣದಲ್ಲಿ ಮೀನುಗಳನ್ನು ಹಿಡಿದಿದ್ದರು. ಮೀನುಗಾರರು ಉಸಿರುಗಟ್ಟಿ ಮೃತಪಟ್ಟಿರುವ ಇಂತಹ ಘಟನೆ ಇದೇ ಮೊದಲು ಎಂದು ಸ್ಥಳೀಯ ಮೀನುಗಾರರು ಹೇಳಿದರು.
ಸಾಮಾನ್ಯವಾಗಿ ಮೀನುಗಾರರು ಈ ಜಾತಿಯ ಮೀನುಗಳನ್ನು ಹಿಡಿದಾಗ, ಅವು ತಿನ್ನಲು ಯೋಗ್ಯವಲ್ಲದ ಕಾರಣ ಹೆಚ್ಚು ಮಂಜುಗಡ್ಡೆಯನ್ನು (ಐಸ್) ಬಳಸುವುದಿಲ್ಲ. ಮೀನುಗಳಲ್ಲಿ ಜೀವಸತ್ವಗಳು (ವಿಟಮಿನ್‌ಗಳು) ಸಮೃದ್ಧವಾಗಿರುವುದರಿಂದ, ಅವು ಕೊಳೆಯುವಾಗ ಹೆಚ್ಚಿನ ಪ್ರಮಾಣದ ಅಮೋನಿಯಾ ಅನಿಲವನ್ನು ಬಿಡುಗಡೆ ಮಾಡುತ್ತವೆ. ಇದನ್ನೇ ಅವರು ಉಸಿರಾಡಿರಬಹುದು ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮುದ್ರ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರಾದ ಶಿವಕುಮಾರ್ ಹರಗಿ ತಿಳಿಸಿದ್ದಾರೆ.