ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಆನ್‌ಲೈನ್ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿಯೊಬ್ಬರನ್ನು ನಂಬಿದ ಯುವಕ, ಆಕೆಯನ್ನು ತನ್ನ ಮನೆಗೆ ಕೆರಿಸಿಕೊಂಡಿದ್ದಾನೆ. ಆದರೆ ಮನೆಗೆ ಬಂದಿದ್ದು ಮಾತ್ರ ಯುವತಿ ಅಲ್ಲ. ಟ್ರಾನ್ಸಜೆಂಡರ್ ವ್ಯಕ್ತಿ. ಆ ವ್ಯಕ್ತಿ ಯುವಕನಿಗೆ ಚಾಕು ತೋರಿಸಿ, ಬೆದರಿಕೆ ಹಾಕಿ 226 ಗ್ರಾಂ ಚಿನ್ನದ ಆಭರಣ ಕದ್ದು ಪರಾರಿಯಾದ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ಬೆಳಕಿಗೆ ಬಂದಿದೆ.
ಅಕ್ಟೋಬರ್ 22 ರಂದು ಬೆಂಗಳೂರಿನ ನಾಗರಭಾವಿಯ ಮನೆಯೊಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ದೂರಿನ ಪ್ರಕಾರ, ಐಟಿ ಉದ್ಯೋಗಿಯಾದ ರೋಹಿತ್ ಅವರು ತನ್ನ ಕುಟುಂಬಸ್ಥರೊಂದಿಗೆ ನಾಗರಭಾವಿಯಲ್ಲಿ ಏಳು ವರ್ಷಗಳಿಂದ ವಾಸ ಮಾಡುತ್ತಿದ್ದರು. ಅಕ್ಟೋಬರ್ 21 ರಂದು ಅವರ ಪತ್ನಿ ತಮಿಳುನಾಡಿಗೆ ಪ್ರವಾಸಕ್ಕೆ ತೆರಳಿದ್ದರು. ಮರುದಿನ ಮಧ್ಯಾಹ್ನ, ರೋಹಿತ್ ಹೆಸರಘಟ್ಟದಲ್ಲಿರುವ ತಮ್ಮ ಮನೆಗೆ ಹೋದರು. ಮನೆಯಲ್ಲಿ ಒಂದು ದಿನದ ಮಟ್ಟಿಗೆ ಉಳಿದುಕೊಳ್ಳಲು ಹೇಳಿ, ಮನೆಯ ಕೀಯನ್ನು ನಂಬಿಕಸ್ಥ ಗೆಳೆಯ ತಿಲಕ್ (ಹೆಸರು ಬದಲಿಸಲಾಗಿದೆ) ಕೊಟ್ಟರು.
ಸ್ನೇಹಿತನ ಮನೆಯ ಕೀ ಪಡೆದ ತಿಲಕ್, ಅಕ್ಟೋಬರ್ 22 ರಂದು ಸಂಜೆ 7.30 ರ ಸುಮಾರಿಗೆ ನಾಗರಭಾವಿ ಮನೆಗೆ ಬರುತ್ತಾನೆ. ಆ ದಿನ ಮನೆಯಲ್ಲಿದ್ದ ತಿಲಕ್ LGBTQA+ ಸಮುದಾಯ ಬಳಸುವ ಡೇಟಿಂಗ್ ಅಪ್ಲಿಕೇಶನ್ Grindr ನಲ್ಲಿ ಒಬ್ಬ ಯುವತಿಯೊಂದಿಗೆ ಚಾಟಿಂಗ್ ಮಾಡುತ್ತಾರೆ. ಮೆಸೇಜ್ ಮಾಡುತ್ತಿರುವುದು ಮಹಿಳೆ ಎಂದು ತಿಳಿದ ತಿಲಕ್, ಆಕೆಯನ್ನು ಮನೆಗೆ ಆಹ್ವಾನಿಸಿದ್ದರು. ರಾತ್ರಿ 10;15ಕ್ಕೆ ಮನೆಗೆ ಬಂದ ಮಹಿಳೆ ಮಾಸ್ಕ್ ಧರಿಸಿದ್ದರು. ಆದರೆ, ಆಕೆ ಮಾಸ್ಕ್ ತೆಗೆದಾಗ ಆಕೆ ಟ್ರಾನ್ಸ್ಜೆಂಡರ್(ತೃತೀಯ ಲಿಂಗಿ ) ಎನ್ನುವುದು ತಿಳಿದುಬಂದಿದೆ.
ಸುಮಾರು 10 ನಿಮಿಷಗಳ ನಂತರ, ಮತ್ತೊಬ್ಬ ತೃತೀಯ ಲಿಂಗಿ ಅಲ್ಲಿಗೆ ಆಗಮಿಸಿದ್ದಾರೆ. ಇಬ್ಬರೂ ಸೇರಿ ಚಾಕುವನ್ನು ತೋರಿಸಿ ತಿಲಕ್ ಗೆ ಬೆದರಿಕೆ ಹಾಕಿದ್ದಾರೆ. ಬಳಿಕ ಅವರು ಮಲಗುವ ಕೋಣೆಯ ಬಾಗಿಲನ್ನು ಮುರಿದು, ಕಪಾಟಿನಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ 226 ಗ್ರಾಂ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ.
ಬಳಿಕ ಈ ವಿಷಯವನ್ನು ತಿಲಕ್, ತನ್ನ ಸ್ನೇಹಿತ ರೋಹಿತ್ ಅವರಿಗೆ ತಿಳಿಸಿದ್ದಾರೆ. ತಕ್ಷಣ ಮನೆಗೆ ಬಂದ ರೋಹಿತ್, ಮಾಂಗಲ್ಯ ಸರ, ನೆಕ್ಲೇಸ್, ಬಳೆ ಮತ್ತು 3 ಚಿನ್ನದ ಚೈನ್, ಬ್ರೇಸ್ಲೆಟ್, 5 ಉಂಗುರ ಹಾಗೂ ಮೂರು ಚಿನ್ನದ ಓಲೆ ಸೇರಿದಂತೆ ಒಟ್ಟು 20 ಲಕ್ಷ ರೂಪಾಯಿ ಮೌಲ್ಯದ 226 ಗ್ರಾಂ ಚಿನ್ನ ಕಳ್ಳತನವಾಗಿದೆ ಎಂದು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಿಸಿದ್ದಾರೆ. ಸಿಸಿಟಿವಿ, ಫೋನ್ ಕರೆಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.