ಧಾರವಾಡ: ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮೂವರು ಪ್ರಯಾಣಿಕರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ತಾಲೂಕಿನ ವೆಂಕಟಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಸಂಭವಿಸಿದೆ.
ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಭವಿಸಿದ್ದು, ದಾವಣಗೆರೆ ಮೂಲದ ವಿನಾಯಕ್ (25), ಮಂಜುನಾಥ್ (29) ಹಾಗೂ ಬಸವರಾಜ (34) ಎಂಬುವವರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ, ಅಭಿಷೇಕ, ಅಜಯ್ ಹಾಗೂ ಬಸನಗೌಡ ಎಂಬ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಬೆಳಗಾವಿ ಕಡೆಯಿಂದ ಧಾರವಾಡಕ್ಕೆ ಬರುತ್ತಿರುವ ವೇಳೆ ಮುಂದಿದ್ದ ವಾಹನ ಡಿಕ್ಕಿ ತಪ್ಪಿಸಲು ಹೋಗಿ ಡಿವೈಡರ್‌ಗೆ ಗುದ್ದಿ ಕಾರ್ ಪಲ್ಟಿ ಹೊಡೆದಿದೆ. ಇದರ ಪರಿಣಾಮವಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರ ಶವಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಗಾಯಗೊಂಡವರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಬೆಳಗಾವಿ ಕಡೆಯಿಂದ ದಾವಣಗೆರೆಯತ್ತ ಹೊರಟಿತ್ತು ಎಂದು ಹೇಳಲಾಗಿದೆ. ಸ್ಥಳಕ್ಕೆ ಗರಗ ಠಾಣೆ ಪಿಎಸ್ಐ ಪ್ರವೀಣ ಗಂಗೋಳ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.