ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಮೊದಲ ತಲೆದಂಡವಾಗಿದ್ದು, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ರನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.
ಅಕ್ರಮದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಭಾಗಿಯಾಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಆಗಸ್ಟ್ 29ರಂದು ಗಂಗ್ವಾರ್ ಅವರನ್ನು ಬಂಧಿಸಿತ್ತು. ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿತ್ತು.
ಸರ್ಕಾರದ ಅಮಾನತು ಆದೇಶದ ಪ್ರಕಾರ, ತನಿಖಾ ಸಂಸ್ಥೆಯ ವಶದಲ್ಲಿದ್ದ ಅವಧಿ 48 ಗಂಟೆ ಮೀರಿರುವುದನ್ನು ಪರಿಗಣಿಸಲಾಗಿದೆ.
ಜೊತೆಗೆ, ಅವರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಅಖಿಲ ಭಾರತ ಸೇವೆಗಳ (ನಡತೆ) ನಿಯಮಗಳು, 1968ರ ನಿಯಮ 3ರ ಉಲ್ಲಂಘನೆಯಾಗಬಹುದು ಎಂದು ಸರ್ಕಾರ ಹೇಳಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತು ಆದೇಶ ಜಾರಿಯಲ್ಲಿರಲಿದೆ ಎಂದು ಹೇಳಲಾಗಿದೆ.
KPSC ಪರೀಕ್ಷಾ ನಿಯಂತ್ರಕರಾಗಿದ್ದ ಗಂಗ್ವಾರ್
2016ನೇ ಬ್ಯಾಚ್‌ನ ಕರ್ನಾಟಕ ಕೇಡರ್ IAS ಅಧಿಕಾರಿಯಾಗಿರುವ ಗಂಗ್ವಾರ್, 2024ರ ಫೆಬ್ರವರಿಯಿಂದ 2026ರ ಮಾರ್ಚ್‌ವರೆಗೆ KPSC ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಇದೇ ಅವಧಿಯಲ್ಲಿ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆದಿತ್ತು ಎನ್ನಲಾಗಿದೆ.
ಪ್ರಸ್ತುತ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವ್ಯಾಪ್ತಿಯಲ್ಲಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
OMR ಶೀಟ್ ತಿರುಚಿದ ಆರೋಪ
ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳ OMR ಉತ್ತರ ಪತ್ರಿಕೆಗಳನ್ನು ತಿರುಚಿ ಅಂಕಗಳನ್ನು ಬದಲಾಯಿಸಲಾಗಿದೆ ಎಂಬ ಆರೋಪಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ.
ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಹಣದ ವ್ಯವಹಾರ ನಡೆದಿರುವ ಶಂಕೆಯೂ ತನಿಖೆಯಲ್ಲಿ ವ್ಯಕ್ತವಾಗಿದೆ. ಗಂಗ್ವಾರ್ ಅವರು ಇಬ್ಬರು ಅಭ್ಯರ್ಥಿಗಳಿಂದ ಸುಮಾರು 1.10 ಕೋಟಿ ರೂ ಪಡೆದಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಆದರೆ ಈ ಆರೋಪಗಳು ಇನ್ನೂ ತನಿಖೆಯ ಹಂತದಲ್ಲಿದ್ದು, ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ.
ಪ್ರಕರಣದ ಭಾಗವಾಗಿ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳ 329 OMR ಉತ್ತರ ಪತ್ರಿಕೆಗಳನ್ನು ಸಿಐಡಿ ವಿಧಿವಿಜ್ಞಾನ ಪರೀಕ್ಷೆಗಾಗಿ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದೆ.
ಮಾಜಿ KPSC ಅಧ್ಯಕ್ಷರ ವಿಚಾರಣೆ
ಪ್ರಕರಣದ ತನಿಖೆ ಮುಂದುವರಿಸಿರುವ ಸಿಐಡಿ, KPSCಯ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಸೇರಿದಂತೆ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದ ಅಭ್ಯರ್ಥಿಗಳನ್ನೂ ವಿಚಾರಣೆ ನಡೆಸಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಯಾರು, ಯಾವ ಹಂತದಲ್ಲಿ ಅಕ್ರಮ ನಡೆಸಿದ್ದಾರೆ ಎಂಬುದರ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ.
ED ದಾಳಿ ಬಳಿಕ ಮತ್ತಷ್ಟು ತೀವ್ರಗೊಂಡ ತನಿಖೆ
ಈ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪಗಳ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ಕೂಡ ತನಿಖೆ ನಡೆಸುತ್ತಿದೆ. ಆಗಸ್ಟ್ 23ರಂದು ಬೆಂಗಳೂರಿನಲ್ಲಿರುವ ಗಂಗ್ವಾರ್ ಅವರ ನಿವಾಸ ಹಾಗೂ ಉತ್ತರ ಪ್ರದೇಶದ ಬರೇಲಿಯಲ್ಲಿರುವ ಅವರ ನಿವಾಸದ ಮೇಲೆ ED ಅಧಿಕಾರಿಗಳು ಶೋಧ ನಡೆಸಿದ್ದರು.
ಇದಕ್ಕೂ ಮುನ್ನ ಆಗಸ್ಟ್ 20ರಿಂದ ಎರಡು ದಿನಗಳ ಕಾಲ ಗಂಗ್ವಾರ್ ಸಂಪರ್ಕಕ್ಕೆ ಸಿಗದೆ ಇರುವ ವಿಚಾರವೂ ಚರ್ಚೆಗೆ ಕಾರಣವಾಗಿತ್ತು. ಬಳಿಕ ಅವರು ಸರ್ಕಾರವನ್ನು ಸಂಪರ್ಕಿಸಿ ಕುಟುಂಬದ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೊರಗೆ ಇದ್ದುದಾಗಿ ತಿಳಿಸಿದ್ದರು ಎನ್ನಲಾಗಿದೆ.
ನಂತರ ಸಿಐಡಿ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸಿ ಬಂಧಿಸಿದ್ದರು. ಪ್ರಕರಣದ ತನಿಖೆ ಮುಂದುವರಿದಿದ್ದು, KPSC ನೇಮಕಾತಿಯಲ್ಲಿ ನಡೆದಿದೆಯೆನ್ನಲಾದ ಅಕ್ರಮದ ಸಂಪೂರ್ಣ ಚಿತ್ರಣ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸ್ಪಷ್ಟವಾಗಲಿದೆ.