ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಆಟೋ – ಲಾರಿ ಮಧ್ಯೆ ಉಂಟಾದ ಮುಖಾಮುಖಿ ಡಿಕ್ಕಿಯಲ್ಲಿ ಮೂರು ತಿಂಗಳ ಮಗು ಹಾಗೂ ತಾಯಿ ಮೃತಪಟ್ಟಿದ್ದಾರೆ.
ಚಿತ್ತಾಪುರ ತಾಲೂಕಿನ ವಾಡಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ವಾಡಿ ಪಟ್ಟಣದ ಶರಣಮ್ಮ ಸಿಂಘೆ (30) ಆಕೆಯ ಮೂರು ತಿಂಗಳ ಮಗ ರಾಘವೇಂದ್ರ ಸಿಂಘೆ ಎಂದು ಗುರುತಿಸಲಾಗಿದೆ.
ಅತ್ತೆ ಸಾಬಮ್ಮ, ಆಟೋ ಚಾಲಕ ಖಾಜಾ ಪಟೇಲ್‌ಗೆ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೂರು ತಿಂಗಳ ಹಿಂದೆ ಸಿಜೇರಿಯನ್ ಮಾಡಿಸಿಕೊಂಡಿದ್ದ ಶರಣಮ್ಮ, ಹೊಲಿಗೆ ಬಿಚ್ಚಿಸಿಕೊಂಡು ಬರಲು ಮಗು ಮತ್ತು ಅತ್ತೆಯೊಂದಿಗೆ ಯಾದಗಿರಿ ಆಸ್ಪತ್ರೆಗೆ ತೆರಳಿದ್ದರು. ಆಟೋದಲ್ಲಿ ವಾಪಸ್ ಬರುವಾಗ ಹಲಕರ್ಟಿ ಸಮೀಪ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.