ಕಲಬುರಗಿ: RSS ಪಥಸಂಚಲನದಲ್ಲಿ ಭಾಗವಹಿಸಿದ್ದ ಆರೋಪದ ಮೇಲೆ ಅಮಾನತುಗೊಂಡಿದ್ದ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಿಕ್ಷಕರಿಗೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಯ (KSAT) ಕಲಬುರಗಿ ಪೀಠದಿಂದ ತಾತ್ಕಾಲಿಕ ರಿಲೀಫ್ ದೊರೆತಿದೆ.
ಗುರುರಾಜ್ ಜೋಶಿ ಮತ್ತು ಅಣ್ಣಾಸಾಹೇಬ್ ದೇಶಮುಖ್ ಅವರು 2025ರ ಅಕ್ಟೋಬರ್ 12ರಂದು ನಡೆದ RSS ಪಥಸಂಚಲನದಲ್ಲಿ ಭಾಗವಹಿಸಿದ್ದರು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಅವರನ್ನು ಅಮಾನತುಗೊಳಿಸಿತ್ತು.
ಇದೀಗ ಶಿಕ್ಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ KSAT ಕಲಬುರಗಿ ಪೀಠ, ಸರ್ಕಾರದ ಅಮಾನತು ಆದೇಶಕ್ಕೆ ತಡೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ KSAT ಕಲಬುರಗಿ ಪೀಠವು, RSS ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ನಿಷೇಧಿಸುವ ಯಾವುದೇ ನಿರ್ದಿಷ್ಟ ಸರ್ಕಾರಿ ಆದೇಶವನ್ನು ಸರ್ಕಾರ ತೋರಿಸಿಲ್ಲ ಎಂದು ಹೇಳಿದೆ.
ಅಲ್ಲದೆ, RSS ಅನ್ನು ರಾಜಕೀಯ ಸಂಘಟನೆ ಎಂದು ಪರಿಗಣಿಸುವ ಕುರಿತು ಈ ಹಂತದಲ್ಲಿ ಯಾವುದೇ ನಿರ್ಣಾಯಕ ವಿಚಾರವನ್ನು ದಾಖಲಿಸದೆ, ರಾಜಕೀಯೇತರ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮಾತ್ರವೇ 2021ರ ಸರ್ಕಾರಿ ನೌಕರರ ನಡತೆ ನಿಯಮಗಳ (Conduct Rules) ಉಲ್ಲಂಘನೆಯಾಗಿದೆ ಎಂದು ಮೇಲ್ನೋಟಕ್ಕೆ ಹೇಳಲಾಗದು ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರ ಅಮಾನತು ಆದೇಶಕ್ಕೆ KSAT ತಡೆ ನೀಡಿದೆ.
ಅಕ್ಟೋಬರ್ 9ಕ್ಕೆ ಮುಂದಿನ ವಿಚಾರಣೆ
ಪ್ರಕರಣದ ಮುಂದಿನ ವಿಚಾರಣೆಯನ್ನು KSAT ಅಕ್ಟೋಬರ್ 9ರಂದು ನಡೆಸಲಿದೆ. ಮುಂದಿನ ವಿಚಾರಣೆಯಲ್ಲಿ ಸರ್ಕಾರ ತನ್ನ ವಾದವನ್ನು ಮಂಡಿಸಲಿದ್ದು, ಶಿಕ್ಷಕರ ವಿರುದ್ಧದ ಅಮಾನತು ಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ಮುಂದಿನ ಆದೇಶ ನೀಡುವ ನಿರೀಕ್ಷೆಯಿದೆ.
ಸದ್ಯಕ್ಕೆ KSATನ ಆದೇಶವು RSS ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಅಮಾನತುಗೊಂಡಿದ್ದ ಯಾದಗಿರಿಯ ಇಬ್ಬರು ಸರ್ಕಾರಿ ಶಿಕ್ಷಕರಿಗೆ ಮಹತ್ವದ ತಾತ್ಕಾಲಿಕ ಪರಿಹಾರ ನೀಡಿದೆ.
RSS ಕಾರ್ಯಕ್ರಮಕ್ಕೆ ಹಾಜರಾಗಿದ್ದಕ್ಕೆ ಅಮಾನತು
ಗುರುರಾಜ್ ಜೋಶಿ ಮತ್ತು ಅಣ್ಣಾಸಾಹೇಬ್ ದೇಶಮುಖ್ ಅವರು RSS ಆಯೋಜಿಸಿದ್ದ ಪಥಸಂಚಲನದಲ್ಲಿ ಭಾಗವಹಿಸಿದ್ದರು. ಸರ್ಕಾರಿ ನೌಕರರಾಗಿದ್ದರೂ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಕಾರಣಕ್ಕೆ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಂಡಿತ್ತು. ಆದರೆ, ಈ ಅಮಾನತು ಆದೇಶವನ್ನು ಪ್ರಶ್ನಿಸಿ ಇಬ್ಬರು ಶಿಕ್ಷಕರು KSAT ಮೊರೆ ಹೋಗಿದ್ದರು.