ಅಥಣಿ: ಆರ್‌ಎಸ್‌ಎಸ್ (RSS) ಹಿರಿಯ ಮುಖಂಡ ಅರವಿಂದ್ ರಾವ್ ದೇಶಪಾಂಡೆ ಭೀಕರ ರಸ್ತೆ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಎರಡು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪಘಾತದ ದೃಶ್ಯವು ಸಮೀಪದ ಮನೆಯೊಂದರ ಸಿಸಿಟಿವಿ (CCTV) ಕ್ಯಾಮರಾದಲ್ಲಿ ಸೆರೆಯಾಗಿದೆ.
ಅರವಿಂದ್ ರಾವ್ ದೇಶಪಾಂಡೆ ಅವರು ರಸ್ತೆ ಬದಿಯಲ್ಲಿ ನಿಂತಿದ್ದ ಕಾರೊಂದರಲ್ಲಿದ್ದ ವ್ಯಕ್ತಿಯ ಜೊತೆ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಅತಿ ವೇಗದಿಂದ ನುಗ್ಗಿ ಬಂದ ಅಥಣಿ ಪುರಸಭೆಯ ಕಸ ವಿಲೇವಾರಿ ವಾಹನ ನಿಂತಿದ್ದ ಕಾರಿಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ.
ಕಾರಿಗೆ ಡಿಕ್ಕಿ ಹೊಡೆದ ಕೂಡಲೇ ಅರವಿಂದ್ ರಾವ್ ಅವರ ಪಕ್ಕ ನಿಂತಿದ್ದ ವ್ಯಕ್ತಿಯ ಸಮಯಪ್ರಜ್ಞೆಯಿಂದ ಪಕ್ಕಕ್ಕೆ ಸರಿದಿದ್ದರಿಂದ ಭಾರಿ ಅನಾಹುತ ತಪ್ಪಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬೆನ್ನಲ್ಲೇ ಜಮಾಯಿಸಿದ ಸ್ಥಳೀಯರು ಕಸ ವಿಲೇವಾರಿ ವಾಹನದ ಚಾಲಕನ ನಿರ್ಲಕ್ಷ್ಯದ ಚಾಲನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.