ಡಿಸಿಎಂ ಡಿಕೆ.ಶಿವಕುಮಾರ್ 
ರಾಜ್ಯ

NRIಗಳಿಗೆ Good News; ಕರ್ನಾಟಕದಲ್ಲಿ ಪ್ರತ್ಯೇಕ ಇಲಾಖೆ ಸ್ಥಾಪನೆಗೆ ಸಚಿವ ಸಂಪುಟ ಅಸ್ತು..!

ಎನ್‌ಆರ್‌ಐಗಳ ವ್ಯವಹಾರ, ಕಲ್ಯಾಣ ಸೇರಿದಂತೆ ವಿವಿಧ ಅಗತ್ಯಗಳನ್ನು ಒಂದೇ ಸೂರಿನಡಿ ಪರಿಹರಿಸಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಲಾಗುತ್ತದೆ. ಇದರಡಿ ಎನ್‌ಆರ್‌ಐಗಳಿಗೆ ಸರ್ಕಾರದ ವಿವಿಧ ಸೇವೆಗಳು ಮತ್ತು ನೆರವು ಪಡೆಯಲು ವಿಶೇಷ ಕಾರ್ಡ್‌ ಕೂಡ ನೀಡಲಾಗುತ್ತದೆ.

ಬೆಂಗಳೂರು: ಅನಿವಾಸಿ ಭಾರತೀಯರು (ಎನ್‌ಆರ್‌ಐ), ವಿದೇಶಿ ಹೂಡಿಕೆದಾರರು ಹಾಗೂ ಜಾಗತಿಕ ಸಂಸ್ಥೆಗಳೊಂದಿಗೆ ಕರ್ನಾಟಕದ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರತ್ಯೇಕ ಇಲಾಖೆಯೊಂದನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಜಾಗತಿಕ ಹೂಡಿಕೆ ಮತ್ತು ಸಾಗರೋತ್ತರ ವ್ಯವಹಾರಗಳ ಇಲಾಖೆ’ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ.

ಈ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಹಾಗೂ ಸಚಿವರು ಇರಲಿದ್ದು, ಸದ್ಯ ಮುಖ್ಯಮಂತ್ರಿ ಅವರ ಮೇಲ್ವಿಚಾರಣೆಯಲ್ಲಿ ಇಲಾಖೆ ಕಾರ್ಯನಿರ್ವಹಿಸಲಿದೆ.

ಎನ್‌ಆರ್‌ಐಗಳ ವ್ಯವಹಾರ, ಕಲ್ಯಾಣ ಸೇರಿದಂತೆ ವಿವಿಧ ಅಗತ್ಯಗಳನ್ನು ಒಂದೇ ಸೂರಿನಡಿ ಪರಿಹರಿಸಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಲಾಗುತ್ತದೆ. ಇದರಡಿ ಎನ್‌ಆರ್‌ಐಗಳಿಗೆ ಸರ್ಕಾರದ ವಿವಿಧ ಸೇವೆಗಳು ಮತ್ತು ನೆರವು ಪಡೆಯಲು ವಿಶೇಷ ಕಾರ್ಡ್‌ ಕೂಡ ನೀಡಲಾಗುತ್ತದೆ. ವಿಶೇಷವಾಗಿ ವಿದೇಶಗಳಲ್ಲಿ ಉದ್ಯೋಗಾವಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ವ್ಯವಸ್ಥೆ ನೆರವಾಗಲಿದೆ.

ಕರ್ನಾಟಕಕ್ಕೆ ಭೇಟಿ ನೀಡುವ ವಿದೇಶಿ ಹೂಡಿಕೆದಾರರು ಮತ್ತು ನಿಯೋಗಗಳಿಂದ ನೇರವಾಗಿ ಹೂಡಿಕೆ ಹಾಗೂ ಸಹಭಾಗಿತ್ವದ ಪ್ರಸ್ತಾವನೆಗಳನ್ನು ಸ್ವೀಕರಿಸುವ ವ್ಯವಸ್ಥೆಯನ್ನೂ ಸರ್ಕಾರ ರೂಪಿಸಲಿದೆ.

ಮುಖ್ಯಮಂತ್ರಿ ಇಂತಹ ನಿಯೋಗಗಳನ್ನು ಭೇಟಿ ಮಾಡಿ ಅವರ ಪ್ರಸ್ತಾವನೆಗಳನ್ನು ಸ್ವೀಕರಿಸಲಿದ್ದು, ಬಳಿಕ ಸಂಬಂಧಿತ ಆಡಳಿತ ಇಲಾಖೆಗೆ ಅಗತ್ಯ ಕ್ರಮಕ್ಕಾಗಿ ಕಳುಹಿಸಲಾಗುತ್ತದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ಹೂಡಿಕೆದಾರರು ಸರ್ಕಾರದ ಪ್ರತಿಕ್ರಿಯೆಗಾಗಿ ಕಾಯುವಂತಾಗಬಾರದು ಅಥವಾ ಹೂಡಿಕೆ ಅವಕಾಶಗಳಿಗಾಗಿ ಬೇರೆ ರಾಜ್ಯಗಳತ್ತ ನೋಡುವ ಪರಿಸ್ಥಿತಿ ಬರಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪಾಲುದಾರಿಕೆ, ಸಹಯೋಗ ಹಾಗೂ ಹೂಡಿಕೆ ಬಯಸುವ ವಿದೇಶಿ ಹೂಡಿಕೆದಾರರು ನೇರವಾಗಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ತಮ್ಮ ಪ್ರಸ್ತಾವನೆಗಳನ್ನು ಮಂಡಿಸಬಹುದು. ನಂತರ ಅವುಗಳನ್ನು ಸಂಬಂಧಿತ ಇಲಾಖೆಗೆ ಕಳುಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ, ನವೋದ್ಯಮ, ಸಾಂಸ್ಕೃತಿಕ ವಿನಿಮಯ, ಸಾಫ್ಟ್ ಪವರ್, ಕ್ರೀಡಾ ರಾಜತಾಂತ್ರಿಕತೆ, ಅವಳಿ ನಗರಗಳ ಸಹಭಾಗಿತ್ವ, ಆರೋಗ್ಯ, ವೈದ್ಯಕೀಯ ಹಾಗೂ ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳನ್ನು ಈ ವ್ಯವಸ್ಥೆ ಒಳಗೊಂಡಿರಲಿದೆ ಎಂದು ವಿವರಿಸಿದರು.

ರಾಜ್ಯ ಸೌಲಭ್ಯ ಮಂಡಳಿ ರಚನೆ

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಾಜ್ಯ ಸೌಲಭ್ಯ ಮಂಡಳಿ ರಚಿಸಲಾಗುವುದು. ಉಪಮುಖ್ಯಮಂತ್ರಿ ಉಪಾಧ್ಯಕ್ಷರಾಗಿರಲಿದ್ದು, ಕೈಗಾರಿಕೆ, ಕೃಷಿ, ತೋಟಗಾರಿಕೆ, ಐಟಿ-ಬಿಟಿ, ನಗರಾಭಿವೃದ್ಧಿ, ಬೆಂಗಳೂರು ಅಭಿವೃದ್ಧಿ, ಉನ್ನತ ಶಿಕ್ಷಣ, ಇಂಧನ, ಆರೋಗ್ಯ, ಕ್ರೀಡೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ಸಚಿವರು ಮಂಡಳಿಯ ಸದಸ್ಯರಾಗಿರುತ್ತಾರೆ.

ಈ ಪ್ರಸ್ತಾವನೆಯ ಕುರಿತು ಸಚಿವ ಸಂಪುಟದಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಕೈಗಾರಿಕೆಗಳು ಮತ್ತು ವಿವಿಧ ಸರ್ಕಾರಿ ಇಲಾಖೆಗಳ ಮೇಲೆ ಇದರ ಪರಿಣಾಮ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪರಮೇಶ್ವರ್ ಅವರು ಹೇಳಿದರು.

ಪ್ರಸ್ತಾವಿತ ಸೌಲಭ್ಯ ಇಲಾಖೆ ಮುಖ್ಯವಾಗಿ ಸಮನ್ವಯ ಮತ್ತು ಸಂಪರ್ಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಹೂಡಿಕೆದಾರರು ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಸ್ತಾವನೆಯೊಂದಿಗೆ ಸರ್ಕಾರವನ್ನು ಸಂಪರ್ಕಿಸಿದಾಗ, ಅಗತ್ಯವಿದ್ದರೆ ಮುಖ್ಯಮಂತ್ರಿಯೊಂದಿಗೆ ಸಭೆ ಏರ್ಪಡಿಸಿ, ನಂತರ ಪ್ರಸ್ತಾವನೆಯನ್ನು ಸಂಬಂಧಿತ ಇಲಾಖೆಗೆ ಕಳುಹಿಸಿ ಮುಂದಿನ ಕ್ರಮಕ್ಕೆ ಅನುಕೂಲ ಮಾಡಿಕೊಡಲಿದೆ.

10 ಸದಸ್ಯರ ಸಚಿವರ ಸಮೂಹಕ್ಕೆ ಸಂಪುಟ ಅಸ್ತು

ಇದೇ ವೇಳೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ಕರ್ನಾಟಕದಲ್ಲೂ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ 10 ಸದಸ್ಯರ ಸಚಿವರ ಸಮೂಹ (GoM) ರಚಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಪ್ರಮುಖ ನಿರ್ಧಾರಗಳನ್ನು ಸಚಿವ ಸಂಪುಟದ ಮುಂದೆ ಮಂಡಿಸುವ ಮುನ್ನ ಈ ಸಮೂಹದಲ್ಲಿ ಚರ್ಚಿಸುವ ವ್ಯವಸ್ಥೆ ಜಾರಿಗೆ ಬರಲಿದೆ.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ಡಾ. ಯತೀಂದ್ರ ಸಿದ್ದರಾಮಯ್ಯ, ಯು.ಟಿ. ಖಾದರ್, ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿ ಹಾಗೂ ಎಂ.ಬಿ. ಪಾಟೀಲ್ ಅವರು ಸಚಿವರ ಸಮೂಹದ ಸದಸ್ಯರಾಗಿರುತ್ತಾರೆ.

ಇದೇ ವೇಳೆ ಸರ್ಕಾರದ ಅಧಿಕೃತ ಹೇಳಿಕೆಗಳನ್ನು ನೀಡಲು ಸರ್ಕಾರದ ವಕ್ತಾರರನ್ನು ನೇಮಿಸಲು ಕೂಡ ನಿರ್ಧರಿಸಲಾಗಿದೆ.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಯು.ಟಿ. ಖಾದರ್, ಈಶ್ವರ್ ಖಂಡ್ರೆ, ಎಚ್.ಸಿ. ಬಾಲಕೃಷ್ಣ ಹಾಗೂ ಲಕ್ಷ್ಮಣ ಸವದಿ ಅವರು ಸರ್ಕಾರದ ವಕ್ತಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಸ್ರೋದ GSLV-F17 ರಾಕೆಟ್‌ ಉಡಾವಣೆ ಯಶಸ್ವಿ: ಮಳೆಯ ನಡುವೆಯೂ ನಭಕ್ಕೆ ಚಿಮ್ಮಿದ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ

ಮೈಸೂರು ದಸರಾಗೆ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ತೀರ್ಮಾನ: ಏರ್ ಶೋ ನಡೆಸಲು ಚಿಂತನೆ

ಅನೈತಿಕ ಸಂಬಂಧವನ್ನು ಕಾನೂನುಬದ್ಧವಾಗಿ ಅಧಿಕೃತಗೊಳಿಸುವುದೇ ಆಗಿದ್ದರೆ, ಕೊನೆಗೂ ಆ ಉದ್ದೇಶ ಈಡೇರಿದೆ: ದುನಿಯಾ ವಿಜಯ್ ಮಾಜಿ ಪತ್ನಿ ರಿಯಾಕ್ಷನ್!

ಬೆಳಗಾವಿ ನೂತನ ಪೊಲೀಸ್ ಆಯುಕ್ತರಾಗಿ ಪ್ರಕಾಶ ನಿಕ್ಕಂ ಅಧಿಕಾರ ಸ್ವೀಕಾರ

ಬಿಜೆಪಿ 'ಬಳ್ಳಾರಿ ಚಲೋ'ಗೆ 3ನೇ ದಿನವೂ ಭರ್ಜರಿ ಸ್ಪಂದನೆ: ರೈತರ 5 ಲಕ್ಷ ರು. ವರೆಗಿನ ಸಾಲಮನ್ನಾಗೆ ವಿಜಯೇಂದ್ರ ಪಟ್ಟು!