ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವಿಶೇಷ ಜಾರಿ ಕಾರ್ಯಾಚರಣೆ ನಡೆಸಿ, ಬೆಂಗಳೂರಿನ ಅಮೆಜಾನ್ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೇಂದ್ರಗಳಿಂದ ಅವಧಿ ಮೀರಿದ ಹಾಗೂ ಸರಿಯಾಗಿ ಲೇಬಲ್ ಮಾಡದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಹಾಗೂ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940ರ ಅಡಿಯಲ್ಲಿ ನೇಮಕಗೊಂಡ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಈ ತಪಾಸಣೆ ನಡೆಸಿದರು.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಪೆಪ್ಟೈಡ್ ಪಾರ್ಟಿ’ಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ದಾಖಲೆಗಳ ಆಧಾರದ ಮೇಲೆ ಆಹಾರ ಸಂಗ್ರಹಣೆ ಮತ್ತು ಪೂರೈಕೆ ಕೇಂದ್ರಗಳನ್ನು ಅಧಿಕಾರಿಗಳು ಪರಿಶೀಲಿಸಿದರು.
ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಮಾರಾಟವಾಗುವ ಉತ್ಪನ್ನಗಳ ಲೇಬಲಿಂಗ್, ತಯಾರಿಕೆ ಹಾಗೂ ಮುಕ್ತಾಯ ದಿನಾಂಕ, ಬಳಕೆಯ ಅವಧಿ ಮತ್ತು ಇತರ ಆಹಾರ ಸುರಕ್ಷತಾ ಮಾನದಂಡಗಳ ಕುರಿತು ತಪಾಸಣೆ ನಡೆಸಲಾಯಿತು. ಅಗತ್ಯ ಪರವಾನಗಿ ಇಲ್ಲದೆ ಔಷಧಗಳನ್ನು ಸಂಗ್ರಹಿಸಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಯಿತು.
ದೇವನಹಳ್ಳಿಯ ಹೈಟೆಕ್ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಪಾರ್ಕ್‌ನಲ್ಲಿರುವ ಅಮೆಜಾನ್‌ನ BLR6 ಕೇಂದ್ರದಲ್ಲಿ ತಪ್ಪು ಅಥವಾ ಅಪೂರ್ಣ ಲೇಬಲಿಂಗ್ ಹೊಂದಿದ್ದ 14 ಲಕ್ಷ ರೂ ಮೌಲ್ಯದ ಆಹಾರ ಉತ್ಪನ್ನಗಳು ಹಾಗೂ 10 ಲಕ್ಷ ರೂ ಮೌಲ್ಯದ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಒಟ್ಟು 24 ಲಕ್ಷ ರೂ ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಗತ್ಯ ಪರವಾನಗಿ ಇಲ್ಲದೆ ಸಂಗ್ರಹಿಸಲಾಗಿದ್ದ ಆರೋಪದ ಮೇರೆಗೆ 2.45 ಲಕ್ಷ ರೂ ಮೌಲ್ಯದ ಔಷಧಗಳನ್ನೂ ವಶಪಡಿಸಿಕೊಳ್ಳಲಾಯಿತು.
ಆನೆಕಲ್ ತಾಲೂಕಿನಲ್ಲಿ ಇರುವ ಅಮೆಜಾನ್‌ನ BLR7 ಕೇಂದ್ರದಲ್ಲಿ ತಪ್ಪು ಅಥವಾ ಅಪೂರ್ಣ ಲೇಬಲಿಂಗ್ ಹೊಂದಿದ್ದ 19 ಲಕ್ಷ ರೂ ಮೌಲ್ಯದ ಆಹಾರ ಉತ್ಪನ್ನಗಳು ಹಾಗೂ 13 ಲಕ್ಷ ರೂ ಮೌಲ್ಯದ ಅವಧಿ ಮೀರಿದ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 32 ಲಕ್ಷ ರೂ ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಗತ್ಯ ಪರವಾನಗಿ ಇಲ್ಲದೆ ಸಂಗ್ರಹಿಸಲಾಗಿದ್ದ 1.57 ಲಕ್ಷ ರೂ ಮೌಲ್ಯದ ಔಷಧಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಆನ್‌ಲೈನ್ ಡೆಲಿವರಿ ವೇದಿಕೆಗಳಿಂದ ದಿನಸಿ, ಹಾಲು, ತರಕಾರಿ, ಮೊಸರು ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳನ್ನು ಖರೀದಿಸಿ, ಅವಧಿ ಮೀರಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಎಚ್‌ಬಿಆರ್ ಲೇಔಟ್‌ನ 6ನೇ ಮುಖ್ಯರಸ್ತೆಯಲ್ಲಿರುವ ಸಪ್ತ ಬಜಾರ್‌ನ್ನು ಇಲಾಖೆ ಪರಿಶೀಲಿಸಿತು.
ಈ ವೇಳೆ ಅವಧಿ ಮೀರಿದ ಗೋಡಂಬಿ, ಬಿಸ್ಕೆಟ್, ರಾಗಿ ಹಿಟ್ಟು, ಚಿಕನ್ ಪ್ಯಾಟೀಸ್, ಪನೀರ್, ಕುಕೀಸ್, ನಟ್ಸ್, ಮೊಟ್ಟೆ ಹಾಗೂ ಹಿಟ್ಟು ಸೇರಿದಂತೆ ಹಲವು ಉತ್ಪನ್ನಗಳು ಪತ್ತೆಯಾಗಿವೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸುಮಾರು 10,000 ರೂ ಮೌಲ್ಯದ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಲಿಂಗರಾಜಪುರಂನ ಲಿಯೋ 7 ಎಂಟರ್‌ಪ್ರೈಸಸ್‌ನಲ್ಲಿ ಅಧಿಕಾರಿಗಳು ಅವಧಿ ಮೀರಿದ ಹಾಗೂ ಮುಕ್ತಾಯದ ಹಂತದಲ್ಲಿದ್ದ ಆಹಾರ ಉತ್ಪನ್ನಗಳನ್ನು ಪತ್ತೆಹಚ್ಚಿದ್ದಾರೆ. ಇವುಗಳಲ್ಲಿ ಪೌಷ್ಟಿಕಾಂಶಯುಕ್ತ ಉತ್ಪನ್ನಗಳು, ಪಾನೀಯಗಳು, ಚಾಕೊಲೇಟ್‌ಗಳು, ಸಿಹಿತಿಂಡಿಗಳು, ತುಪ್ಪ, ನಟ್ಸ್ ಮತ್ತು ಬೀಜಗಳು ಸೇರಿವೆ.
ಆವರಣದಲ್ಲಿ ಸುಮಾರು 56 ಲಕ್ಷ ರೂ ಮೌಲ್ಯದ ಆಹಾರ ಉತ್ಪನ್ನಗಳನ್ನು ಸಂಗ್ರಹಿಸಲಾಗಿತ್ತು ಎಂದು ಮಾಲೀಕರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆವರಣದ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿರುವ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೇಂದ್ರವನ್ನೂ ಇಲಾಖೆ ಪರಿಶೀಲಿಸಿತು. ಇಲ್ಲಿ 42 ಲಕ್ಷ ರೂ ಮೌಲ್ಯದ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಸ್ವಚ್ಛ ಪರಿಸ್ಥಿತಿ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಮತ್ತು ಅನ್ವಯವಾಗುವ ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕೇಂದ್ರವನ್ನು ಬಂದ್ ಮಾಡಲಾಗಿದೆ.
ಈ ಕೇಂದ್ರದಲ್ಲಿ ಸುಮಾರು 1 ಕೋಟಿ ರೂ ಮೌಲ್ಯದ ಅವಧಿ ಮೀರಿದ ಹಾಗೂ ಸರಿಯಾಗಿ ಲೇಬಲ್ ಮಾಡದ ಉತ್ಪನ್ನಗಳು ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಇಲಾಖೆ ತಿಳಿಸಿದೆ.
ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 1.38 ಕೋಟಿ ರೂ ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ. ಇದರಲ್ಲಿ 33 ಲಕ್ಷ ರೂ ಮೌಲ್ಯದ ತಪ್ಪಾಗಿ ಅಥವಾ ಅಪೂರ್ಣವಾಗಿ ಲೇಬಲ್ ಮಾಡಲಾದ ಉತ್ಪನ್ನಗಳು ಹಾಗೂ 1.05 ಕೋಟಿ ರೂ ಮೌಲ್ಯದ ಅವಧಿ ಮೀರಿದ ಅಥವಾ ಮುಕ್ತಾಯದ ಹಂತದಲ್ಲಿದ್ದ ಉತ್ಪನ್ನಗಳು ಸೇರಿವೆ.
ಅಗತ್ಯ ಪರವಾನಗಿ ಇಲ್ಲದೆ ಸಂಗ್ರಹಿಸಲಾಗಿದ್ದ 4.02 ಲಕ್ಷ ರೂ ಮೌಲ್ಯದ ಔಷಧಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.