ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣಾ (SIR) ಕಾರ್ಯಕ್ರಮದ ಭಾಗವಾಗಿ 24.97 ಲಕ್ಷಕ್ಕೂ ಹೆಚ್ಚು ನೋಟಿಸ್‌ಗಳನ್ನು ಮತದಾರರಿಗೆ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಶುಕ್ರವಾರ ತಿಳಿಸಿದೆ.
ಸೆಪ್ಟೆಂಬರ್ 10ರ ಮಾಹಿತಿಯಂತೆ, ರಾಜ್ಯದ ಮತದಾರರ ಪಟ್ಟಿಯಲ್ಲಿ ಒಟ್ಟು 4,46,58,413 ಮತದಾರರಿದ್ದಾರೆ; ಇವರಲ್ಲಿ 2.21 ಕೋಟಿ ಪುರುಷರು, 2.24 ಕೋಟಿ ಮಹಿಳೆಯರು ಮತ್ತು 2,874 ತೃತೀಯ ಲಿಂಗಿ ಮತದಾರರು ಸೇರಿದ್ದಾರೆ ಎಂದು ಅದು ತಿಳಿಸಿದೆ.
ಎಸ್ಐಆರ್ ಪ್ರಕ್ರಿಯೆಯ ಭಾಗವಾಗಿ, 'ಮ್ಯಾಪಿಂಗ್ ಇಲ್ಲದಿರುವಿಕೆ' (no mapping) ಮತ್ತು 'ವ್ಯತ್ಯಾಸಗಳು' (anomalies) ಎಂಬ ವರ್ಗಗಳ ಅಡಿಯಲ್ಲಿ ಬರುವ ಮತದಾರರಿಗೆ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ನೀಡಿರುವ ಹೇಳಿಕೆ ಪ್ರಕಾರ, ಸೆಪ್ಟೆಂಬರ್ 10ರ ವೇಳೆಗೆ ರಾಜ್ಯದಾದ್ಯಂತ ಒಟ್ಟು 43,81,760 ನೋಟಿಸ್‌ಗಳನ್ನು ಸಿದ್ಧಪಡಿಸಲಾಗಿದೆ. ಇವುಗಳಲ್ಲಿ 24,97,075 (ಶೇ 56.99) ನೋಟಿಸ್‌ಗಳನ್ನು ಯಶಸ್ವಿಯಾಗಿ ನೀಡಲಾಗಿದ್ದು, 18,84,685 ನೋಟಿಸ್‌ಗಳನ್ನು ಇನ್ನೂ ಬಾಕಿ ಇವೆ.
'ನೋಟಿಸ್ ಪಡೆದವರ ಪೈಕಿ ಇದೀಗ, 7,03,710 (ಶೇ 28.18) ಮಂದಿಯ ವಿಚಾರಣೆ ಪೂರ್ಣಗೊಂಡಿದೆ. ಇನ್ನೂ 17,93,365 ವಿಚಾರಣೆಗಳು ಬಾಕಿ ಇವೆ. ಬಾಕಿ ಇರುವ ವಿಚಾರಣೆಗಳನ್ನು ಸೆಪ್ಟೆಂಬರ್ 12ರೊಳಗೆ ನಡೆಸಿ, ಸೆಪ್ಟೆಂಬರ್ 22ರೊಳಗೆ ಎಲ್ಲ ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಪೂರ್ಣಗೊಳಿಸಲಾಗುತ್ತದೆ' ಎಂದು ಅದು ತಿಳಿಸಿದೆ.
ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಕೋರಿಕೆ ಮೇರೆಗೆ, 'ಮ್ಯಾಪಿಂಗ್ ಇಲ್ಲದಿರುವಿಕೆ' (no mapping) ಮತ್ತು 'ವ್ಯತ್ಯಾಸಗಳು' (anomalies) ಎಂಬ ವರ್ಗಗಳ ಅಡಿಯಲ್ಲಿ ನೋಟಿಸ್‌ಗಳನ್ನು ಪಡೆದ ವ್ಯಕ್ತಿಗಳ ಪಟ್ಟಿಗಳನ್ನು ಸೆಪ್ಟೆಂಬರ್ 5 ರಂದು ಸಿಇಒ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಸಾರ್ವಜನಿಕರಿಂದ ಸ್ವೀಕರಿಸಲಾದ ಕ್ಲೈಮ್ಸ್ ಮತ್ತು ಆಕ್ಷೇಪಣೆಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗಿದೆ. ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ, ಮತದಾರರ ನೋಂದಣಿಗಾಗಿ ಸೆಪ್ಟೆಂಬರ್ 19 ಮತ್ತು 20 ರಂದು ಎರಡನೇ ವಿಶೇಷ ಅಭಿಯಾನ ನಡೆಸಲಾಗುವುದು.
ಅಧಿಕಾರಿಗಳ ಪ್ರಕಾರ, ಮತದಾರರ ನೋಂದಣಿ ಪ್ರಕ್ರಿಯೆಯ ಪ್ರಗತಿ ಪರಿಶೀಲಿಸಲು ಮುಖ್ಯ ಚುನಾವಣಾಧಿಕಾರಿಯು ಸೆಪ್ಟೆಂಬರ್ 9 ರಂದು ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಚುನಾವಣಾ ನೋಂದಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ನೋಟಿಸ್‌ಗಳನ್ನು ಸಕಾಲದಲ್ಲಿ ತಲುಪಿಸುವುದು ಮತ್ತು ವಿಚಾರಣೆಗಳನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದ ಅದೇ ವಿಭಾಗದಲ್ಲಿ, ಹೊಸ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸುತ್ತಿಲ್ಲ ಎಂದು ಹಲವು ಮತದಾರರು ಚುನಾವಣಾಧಿಕಾರಿಗಳ ಕಚೇರಿಗೆ ದೂರು/ಪ್ರಶ್ನೆಗಳನ್ನು ಸಲ್ಲಿಸಿದ್ದಾರೆ.
ಮತಗಟ್ಟೆಗಳನ್ನು ಪುನರ್ ವ್ಯವಸ್ಥಿತಗೊಳಿಸಿರುವುದರಿಂದ ಮತ್ತು ಮತದಾರರ ಪಟ್ಟಿಯಲ್ಲಿನ ಸಂಖ್ಯೆಗಳನ್ನು ಮರುಹೊಂದಿಸಿರುವುದರಿಂದ, ಮತದಾರರ ವಿಭಾಗದ ಸಂಖ್ಯೆ ಮತ್ತು ಕ್ರಮ ಸಂಖ್ಯೆ ಬದಲಾಗಿರಬಹುದು ಎಂದು ಅದು ಸ್ಪಷ್ಟಪಡಿಸಿದೆ.
'ಹಿಂದಿನ ವಿಭಾಗಗಳಲ್ಲಿ ತಮ್ಮ ಹೆಸರುಗಳನ್ನು ಕಂಡುಕೊಳ್ಳಲು ಸಾಧ್ಯವಾಗದ ಮತದಾರರು, voters.eci.gov.in ಜಾಲತಾಣದಲ್ಲಿ ಅಥವಾ ECINET ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ EPIC ಸಂಖ್ಯೆಯನ್ನು ಬಳಸಿ ಪರಿಶೀಲಿಸುವಂತೆ ಕೋರಲಾಗಿದೆ' ಎಂದು ಅದು ತಿಳಿಸಿದೆ.
ಎಲ್ಲ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಸೆಪ್ಟೆಂಬರ್ 11 ರಂದು ಒಂದು ಜ್ಞಾಪನ ಪತ್ರವನ್ನು ಹೊರಡಿಸಲಾಗಿದ್ದು, ಅದರಲ್ಲಿ ಮತದಾರರ ನೋಂದಣಿ ಅಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ನಿರ್ದೇಶಿಸಲಾಗಿದೆ.
ಹಿರಿಯ ನಾಗರಿಕರು, ವಿಶೇಷಚೇತನರು, ಅನಾರೋಗ್ಯಪೀಡಿತರು ಅಥವಾ ವಿದೇಶದಲ್ಲಿರುವ ಮತದಾರರಿಗೆ ನೀಡಲಾದ ನೋಟಿಸ್‌ಗಳನ್ನು ಇತ್ಯರ್ಥಪಡಿಸಲು, ಅವರ ಪರವಾಗಿ ಕುಟುಂಬದ ವಯಸ್ಕ ಸದಸ್ಯರೊಬ್ಬರು ತಮ್ಮ ಮುಂದೆ ಖುದ್ದಾಗಿ ಹಾಜರಾಗಿ ಅಗತ್ಯ ದಾಖಲೆಗಳು ಅಥವಾ ಮಾಹಿತಿಯನ್ನು ಸಲ್ಲಿಸಲು ಅವಕಾಶ ನೀಡುವಂತೆ EROಗಳು ಮತ್ತು AEROಗಳಿಗೆ ಸೂಚಿಸಲಾಗಿದೆ ಎಂದು ಅದು ತಿಳಿಸಿದೆ.