ಬೆಂಗಳೂರು: ಇತ್ತೀಚೆಗೆ ತೆರವುಗೊಳಿಸಲಾದ ರಸ್ತೆ ಮತ್ತು ಫುಟ್‌ಪಾತ್‌ಗಳನ್ನು ಮತ್ತೆ ಆಕ್ರಮಿಸಿಕೊಳ್ಳುವ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಕಡ್ಡಾಯವಾಗಿ ಎಫ್ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಖಡಕ್ ಸೂಚನೆ ನೀಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿದ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಬೀದಿ ವ್ಯಾಪಾರಿಗಳ ಅತಿಕ್ರಮಣದಿಂದ ಒಟ್ಟು 1,373.32 ಕಿ.ಮೀ. ರಸ್ತೆಗಳನ್ನು ಮುಕ್ತಗೊಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲದೆ, ಮತ್ತೆ ಅತಿಕ್ರಮಣ ಮಾಡುವ ಬೀದಿ ವ್ಯಾಪಾರಿಗಳ ಸರಕುಗಳನ್ನು ವಶಪಡಿಸಿಕೊಂಡು ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಪದೇಪದೆ ಅತಿಕ್ರಮಣ ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ತಿಳಿಸಿದರು.
ಅತಿಕ್ರಮಣ ತೆರವುಗೊಳಿಸುವುದಷ್ಟೇ ಸಾಕಾಗುವುದಿಲ್ಲ. ಅದೇ ಪ್ರದೇಶಗಳಲ್ಲಿ ಮತ್ತೆ ಅತಿಕ್ರಮಣವಾಗದಂತೆ ನೋಡಿಕೊಳ್ಳಬೇಕು. ಅತಿಕ್ರಮಣ ತೆರವುಗೊಳಿಸಲಾಗಿದೆ ಎಂದು ಹೇಳುವುದರಿಂದ ಮಾತ್ರ ಉದ್ದೇಶ ಈಡೇರುವುದಿಲ್ಲ. ತೆರವುಗೊಳಿಸಲಾದ ರಸ್ತೆಗಳಲ್ಲಿ ನಿಗಾ ವಹಿಸಲು ನಗರ ನಿಗಮಗಳು ನಾಗರಿಕ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ಜಂಟಿ ಕಾರ್ಯಪಡೆಗಳನ್ನು ರಚಿಸಬೇಕು.
ತೆರವುಗೊಳಿಸಿದ ಪ್ರದೇಶಗಳಲ್ಲಿ ನಿಯಮಿತ ತಪಾಸಣೆ ಮಾತ್ರವಲ್ಲದೆ, ದಿಢೀರ್ ತಪಾಸಣೆಗಳನ್ನೂ ನಡೆಸಬೇಕು. ಮರು ಅತಿಕ್ರಮಣ ಕಂಡುಬಂದರೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಇದೇ ವೇಳೆ ಬೀದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಅಡ್ಡಿಪಡಿಸುವುದು ಸರ್ಕಾರದ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದ ಅವರು. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಪ್ರಸ್ತಾಪವನ್ನೂ ಅವರು ಮುಂದಿಟ್ಟರು.
ಬೀದಿ ವ್ಯಾಪಾರಕ್ಕೆ ನಿರ್ಬಂಧವಿರುವ ರಸ್ತೆಗಳನ್ನು ಅಧಿಕಾರಿಗಳು ಮತ್ತು ಪೊಲೀಸರು ವ್ಯಾಪಾರಿಗಳಿಗೆ ಅಧಿಕೃತವಾಗಿ ತಿಳಿಸಬೇಕು. ಅದೇ ವೇಳೆ, ಪಾದಚಾರಿಗಳು ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಪ್ರಮುಖ ರಸ್ತೆಗಳು ಮತ್ತು ಮುಖ್ಯ ಜಂಕ್ಷನ್‌ಗಳಲ್ಲಿ ವ್ಯಾಪಾರ ನಡೆಸಲು ಪರ್ಯಾಯ ಸ್ಥಳಗಳನ್ನು ಗುರುತಿಸಬೇಕು ಎಂದು ಹೇಳಿದರು.
‘ತ್ಯಾಜ್ಯ ಮುಕ್ತ’ ಅಭಿಯಾನದ ಪ್ರಗತಿ ಕುರಿತು ಮಾಹಿತಿ ನೀಡಿದ ಸಚಿವರು, ಐದು ನಗರ ನಿಗಮಗಳ ವ್ಯಾಪ್ತಿಯಲ್ಲಿ ಒಟ್ಟು 5,267.65 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದರು. ಈ ಕಾರ್ಯವನ್ನು ಅಧಿಕಾರಿಗಳು ಮುಂದುವರಿಸಬೇಕು ಎಂದು ಸೂಚಿಸಿದರು.