ಮೈಸೂರು: ಲಂಚದ ವಿಷಯವಾಗಿ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ ಎಂಬ ಸಚಿವ ಶಿವಲಿಂಗೇಗೌಡರ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ.
ಮೈಸೂರಿನ ವಾಯ್ಸ್ ಆಫ್ ಪೀಪಲ್ ಸಂಸ್ಥೆ ಸಚಿವ ಶಿವಲಿಂಗೇಗೌಡ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ್ದು, ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಹಾಸನ ಜಿಲ್ಲೆಯ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಸಚಿವ ಶಿವಲಿಂಗೇಗೌಡ ಅವರು ಲಂಚದ ವಿಚಾರಕ್ಕೆ ಎಡವಟ್ಟಿನ ಹೇಳಿಕೆ ಕೊಟ್ಟು ವಿವಾದವನ್ನ ಮೈ ಮೇಲೆ ಎಳೆದುಕೊಂಡಿದ್ದು, ವಿಪಕ್ಷಗಳಿಗೆ ಇದೇ ಅಸ್ತ್ರವಾಗಿದೆ. ಮೈಸೂರಿನ ವಾಯ್ಸ್ ಆಫ್ ಪೀಪಲ್ ಸಂಸ್ಥೆಯಿಂದ ಸಚಿವ ಶಿವಲಿಂಗೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿದೆ.
ಕೆಲಸ ಆದ ನಂತರ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ಧರ್ಮ ಎಂದು ಸಚಿವ ಶಿವಲಿಂಗೇಗೌಡ ಹೇಳಿಕೆ ನೀಡಿದ್ದು, ಈ ಮೂಲಕ ಅವ್ರು ನೇರವಾಗಿ ಲಂಚ ನೀಡುವಂತೆ ಜನರಿಗೆ ಸಲಹೆ ಕೊಟ್ಟಿದ್ದಾರೆ. ಇವರು ಸಚಿವರಾಗಿರಲು ಅನ್ ಫಿಟ್, ಅವರು ಈ ಕೂಡಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ವಾಯ್ಸ್ ಆಫ್ ಪೀಪಲ್ ಮುಖ್ಯಸ್ಥ ವಸಂತ ರಾವ್ ಚೌಹಾಣ್ ಆಗ್ರಹಿಸಿದ್ದಾರೆ.
ಲಂಚದ ವಿಚಾರದ ಹೇಳಿಕೆ ಕೊಟ್ಟ ಸಚಿವ ಶಿವಲಿಂಗೇಗೌಡರು ಸಾರ್ವಜನಿಕವಾಗಿ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಬೇಕು. ಈ ಬಗ್ಗೆ ರಾಜ್ಯಪಾಲರಿಗೂ ದೂರು ಸಲ್ಲಿಸುತ್ತೇವೆ. ಇವರ ವಿರುದ್ದ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಅಭಿಯಾನ ಮಾಡುತ್ತೇವೆ ಎಂದು ವಾಯ್ಸ್ ಆಫ್ ಪೀಪಲ್ ಮುಖ್ಯಸ್ಥ ವಸಂತ ರಾವ್ ಚೌಹಾಣ್ ಹೇಳಿದ್ದಾರೆ.
ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ನಿಮ್ಮ ಧರ್ಮ. ಆದರೆ, ಬಲವಂತವಾಗಿ ಹಣ ಕೀಳುವುದು ಸರಿಯಲ್ಲ ಎಂದು ಸಕಲೇಶಪುರದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದ ಸಚಿವ ಕೆ.ಎಂ. ಶಿವಲಿಂಗೇಗೌಡ ಹೇಳಿದ್ದರು.