ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಗುರುವಾರ ಶಾಕ್ ನೀಡಿದೆ.
ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶವನ್ನು ಪಾಲಿಸುವುದನ್ನು ಮುಂದುವರಿಸುವಂತೆ ಕರ್ನಾಟಕಕ್ಕೆ ಸೂಚಿಸಿರುವ ನ್ಯಾಯಾಲಯ, ತಮಿಳುನಾಡಿನ ಆಕ್ಷೇಪಕ್ಕೆ ಒಂದು ವಾರದೊಳಗೆ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿದೆ.
ಕರ್ನಾಟಕದಲ್ಲಿ ಮಳೆ ಕೊರತೆಯಿಂದ ಜಲಾಶಯಗಳ ನೀರಿನ ಮಟ್ಟ ಕುಸಿದಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲೂ ನೀರಿನ ಲಭ್ಯತೆ ಕಡಿಮೆಯಾಗಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 81 ಟಿಎಂಸಿ ನೀರಿನ ಸಂಗ್ರಹವಿದ್ದರೆ, ಈ ಬಾರಿ ಒಳಹರಿವಿನಲ್ಲಿ ಕೊರತೆ ಉಂಟಾಗಿದೆ ಎಂದು ಕರ್ನಾಟಕ ವಾದಿಸಿದೆ.
ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿರುವುದರಿಂದ CWMA ಆದೇಶದಂತೆ ನೀರು ಬಿಡುಗಡೆ ಮಾಡುವುದು ಕಷ್ಟ ಎಂದು ಕರ್ನಾಟಕ ತಿಳಿಸಿದೆ.
ಕುಡಿಯುವ ನೀರು, ಪರಿಸರ ಮತ್ತು ಕೈಗಾರಿಕೆಗಳ ಅಗತ್ಯಗಳನ್ನು ಪರಿಗಣಿಸಿ ತಮಿಳುನಾಡು ಹೆಚ್ಚುವರಿ ನೀರು ಬಿಡುಗಡೆಗೆ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ತಮಿಳುನಾಡಿನಲ್ಲಿ ಕೂಡ ನೀರಿನ ಕೊರತೆ ಎದುರಾಗಿದೆ ಎಂದು ಆ ರಾಜ್ಯದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸುಮಾರು 4.5 ಲಕ್ಷ ಎಕರೆ ಬೆಳೆಗಳಿಗೆ ನೀರಿನ ಅಗತ್ಯವಿದ್ದು, ಕರ್ನಾಟಕ CWMA ಆದೇಶವನ್ನು ಪಾಲಿಸುತ್ತಿಲ್ಲ ಎಂದು ತಮಿಳುನಾಡು ಆಕ್ಷೇಪಿಸಿದೆ.
ನೀರಿನ ಕೊರತೆಯಿಂದಾಗಿ ಈಗಾಗಲೇ ಪೂರ್ವೈ ಬೆಳೆ ನಷ್ಟವಾಗಿದೆ. ಹೀಗಾಗಿ ನ್ಯಾಯಾಲಯದ ಹಿಂದಿನ ತೀರ್ಪಿನಂತೆ ಪ್ರಮಾಣಾನುಗುಣವಾಗಿ ನೀರು ಬಿಡುಗಡೆ ಮಾಡುವಂತೆ ಆದೇಶವನ್ನು ಜಾರಿಗೊಳಿಸಬೇಕು ಎಂದು ತಮಿಳುನಾಡು ಪರ ವಕೀಲರು ಒತ್ತಾಯಿಸಿದ್ದಾರೆ.