ಬೆಂಗಳೂರು: ಝೆನ್-ಜಿ ಮತದಾರರ ಹಕ್ಕು ಕಸಿಯುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಆರೋಪಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ ಅರ್ಹ ಮತದಾರರನ್ನ ಕೈಬಿಡಲಾಗುತ್ತಿದೆ ಎಂದು ಆರೋಪಿಸಿದರು.
2015 ರಿಂದ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಚುನಾವಣಾ ಆಯೋಗ ಅಕ್ರಮ ಮಾಡುತ್ತಿದೆ. ಕರ್ನಾಟಕದಲ್ಲಿ ಸುಮಾರು 1.50 ಕೋಟಿ ಮತದಾರರನ್ನ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅಲ್ಲದೆ, 65 ಲಕ್ಷ ಮತಗಳನ್ನು ಶಿಫ್ಟ್ ಮಾಡಲಾಗಿದೆ ಎಂದು ಕಿಡಿ ಕಾರಿದರು.
ಪ್ರಜಾಪ್ರಭುತ್ವದ ಬುನಾದಿಯೇ ಮತದಾನ. ಅರ್ಹ ಮತದಾರರೊಬ್ಬರ ಹೆಸರನ್ನೂ ಮತದಾರರ ಪಟ್ಟಿಯಿಂದ ಕೈಬಿಡಬಾರದು. ಮತದಾರರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂಬ ಉದ್ದೇಶದಿಂದಲೇ ರಾಜೀವ್ ಗಾಂಧಿ ಕಾಲದಲ್ಲಿ 18 ವರ್ಷಕ್ಕೆ ಮತದಾನದ ಹಕ್ಕು ನೀಡಲಾಯಿತು.
ರಾಹುಲ್ ಗಾಂಧಿ ಅವರು 2024ರ ನಂತರ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಬಗ್ಗೆ ಹಲವು ಬಾರಿ ಆರೋಪ ಮಾಡಿದ್ದಾರೆ. ಮಹದೇವಪುರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಏನಾಗಿದೆ ಎಂಬುದನ್ನು ಅವರು ದೇಶದ ಗಮನಕ್ಕೆ ತಂದಿದ್ದರು. ಆದ್ರೆ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಈಗಲಾದರೂ ಜನ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಹರಿಪ್ರಸಾದ್, ಆಯೋಗದಲ್ಲಿ ಆಯುಕ್ತರ ನಡುವೆ ಭಿನ್ನಮತವಿದೆ. 14 ವಿಚಾರಗಳಿಗೆ ಇಬ್ಬರು ಚುನಾವಣಾ ಆಯುಕ್ತರು ವಿರೋಧ ವ್ಯಕ್ತಪಡಿಸಿದ್ದರೂ, ಅದನ್ನು ಪರಿಗಣಿಸಲಾಗಿಲ್ಲ.
ಮೋದಿ ಹಾಗೂ ಅಮಿತ್ ಶಾ ಅವರು ಗೌಪ್ಯವಾಗಿ ಚುನಾವಣಾ ಆಯೋಗಕ್ಕೆ ಸೂಚನೆ ನೀಡುತ್ತಿದ್ದಾರೆ. ದೇಶಾದ್ಯಂತ ಸುಮಾರು 13 ಕೋಟಿ ಮತಗಳನ್ನ ಡಿಲೀಟ್ ಮಾಡಲಾಗಿದೆ. ಕರ್ನಾಟಕದಲ್ಲೂ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
‘ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವ ತಪ್ಪುಗಳಾಗುತ್ತಿವೆ. ನಾವು ಚುನಾವಣಾ ಆಯೋಗಕ್ಕೆ ಪ್ರಶ್ನೆ ಮಾಡಿದಾಗ ಬಿಜೆಪಿ ಮುಖಂಡರು ಉತ್ತರ ನೀಡುತ್ತಿದ್ದಾರೆ’ ಎಂದು ದೂರಿದರು.