ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಆರಂಭಿಸಿರುವ 'ಓಪನ್ ಹೌಸ್' ಕಾರ್ಯಕ್ರಮ (OHM) ನಾಗರಿಕರ ದೂರುಗಳನ್ನು ಆಲಿಸಿ ಸ್ಥಳದಲ್ಲೇ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಪರಿಹಾರ ಒದಗಿಸುವ ಒಂದು ಯಶಸ್ವಿ ಸಾರ್ವಜನಿಕ ವೇದಿಕೆಯಾಗಿದ್ದು, ಅಕ್ಟೋಬರ್ 1 ರಂದು 100ನೇ 'ಓಪನ್ ಹೌಸ್ ಸಭೆ ನಡೆಯಲಿದೆ.
ಇಲ್ಲಿಯವರೆಗೂ ನಾಗರಿಕರ ಕುಂದುಕೊರತೆ ನಿವಾರಣೆ ವ್ಯವಸ್ಥೆಯಡಿ ಒಟ್ಟು 7,410 ದೂರುಗಳು ದಾಖಲಾಗಿದ್ದು, ಅವುಗಳಲ್ಲಿ 4,759 ದೂರುಗಳನ್ನು ಬಗೆಹರಿಸಲಾಗಿದೆ ಎಂದು ಬಿಡಿಎ ತಿಳಿಸಿದೆ. ಜುಲೈ 3, 2025 ರಂದು ಮೊದಲ ಓಪನ್ ಹೌಸ್ ಸಭೆ ನಡೆದಿತ್ತು. ಅಂದಿನಿಂದ ಈ ಸಭೆ ನಗರದ ನಿವಾಸಿಗಳಿಗೆ ತಮ್ಮ ಕುಂದುಕೊರತೆಗಳನ್ನು ಬಿಡಿಎ ಅಧಿಕಾರಿಗಳ ಮುಂದೆ ನೇರವಾಗಿ ಮಂಡಿಸಲು ವೇದಿಕೆಯನ್ನು ಒದಗಿಸಿವೆ.
ಬಿಡಿಎ ಬಳಿ ಲಭ್ಯವಿರುವ ವಲಯವಾರು ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 26 ರವರೆಗೆ ಉತ್ತರ ವಲಯದಲ್ಲಿ ಅತಿ ಹೆಚ್ಚು ಅಂದರೆ 2,435 ದೂರುಗಳು ದಾಖಲಾಗಿವೆ. ನಂತರದ ಸ್ಥಾನಗಳಲ್ಲಿ ಪಶ್ಚಿಮ ವಲಯ (2,547), ದಕ್ಷಿಣ ವಲಯ (1,550) ಮತ್ತು ಪೂರ್ವ ವಲಯ (878) ಇವೆ. ಒಟ್ಟು 4,759 ದೂರುಗಳು ಪರಿಹಾರಗೊಂಡಿದ್ದು, ಶೇ. 68 ರಷ್ಟು ಪರಿಹಾರ ದರ ದಾಖಲಾಗಿದೆ ಎಂದು ಅಂಕಿಅಂಶಗಳು ತಿಳಿಸುತ್ತವೆ.
ಈ ವ್ಯವಸ್ಥೆಯು ತುರ್ತು ದೂರುಗಳಿಗೆ ಏಳು ದಿನಗಳು, ಸಾಮಾನ್ಯ ದೂರುಗಳಿಗೆ 30 ದಿನಗಳು ಮತ್ತು ಓಪನ್ ಹೌಸ್ ದೂರುಗಳಿಗೆ 100 ದಿನಗಳ ತಾತ್ಕಾಲಿಕ ಕಾಲಮಿತಿಯನ್ನು ಪರಿಹಾರಕ್ಕಾಗಿ ನಿಗದಿಪಡಿಸಿದೆ. 'ಮೂರು ಅವಕಾಶಗಳ ಕಾರ್ಯವಿಧಾನ'ದ ಅಡಿಯಲ್ಲಿ, ಮೊದಲ ಎರಡು ಹಂತಗಳಲ್ಲಿ ಬಗೆಹರಿಯದ ದೂರುಗಳನ್ನು ಮೂರನೇ ಓಪನ್ ಹೌಸ್ ಸಭೆಯಲ್ಲಿ ಕಡ್ಡಾಯವಾಗಿ ಬಗೆಹರಿಸಬೇಕು ಅಥವಾ ಅಧಿಕೃತವಾಗಿ ವಿಲೇವಾರಿ ಮಾಡಬೇಕು ಎಂಬ ನಿಯಮವಿದೆ.
ಓಪನ್ ಹೌಸ್ ಸಭೆಗಳ ಪ್ರಯೋಜನ ಪಡೆದ ವಿವೇಕ್ ಸಂದಲ್ ಮಾತನಾಡಿ, "ನನ್ನ ಭಾವ ಮತ್ತು ನಾನು, ಅವರ ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ಮಾರಾಟ ಪತ್ರವನ್ನು (absolute sale deed) ಪಡೆಯಲು ಸುಮಾರು ಮೂರು ವರ್ಷಗಳಿಂದ ಬಿಡಿಎ ಕಚೇರಿಗೆ ಅಲೆದಾಡುತ್ತಿದ್ದೆವು. ಓಪನ್ ಹೌಸ್ ವ್ಯವಸ್ಥೆಯನ್ನು ಸಂಪರ್ಕಿಸಿದ ನಂತರ, ಕೇವಲ ಮೂರು ದಿನಗಳಲ್ಲಿ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡಿತು. ಇದರಲ್ಲಿ ಕೇಸ್‌ವರ್ಕರ್ ಮಟ್ಟದಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ಎಲ್ಲರೂ ನಮಗೆ ನೆರವಾದರು. ಪಾರದರ್ಶಕತೆ, ಸಹಕಾರ ಮತ್ತು ಪ್ರಕ್ರಿಯೆಯು ನಮ್ಮ ಹಿಂದಿನ ಅನುಭವಕ್ಕಿಂತ ಸಂಪೂರ್ಣ ಭಿನ್ನ ಮತ್ತು ಉತ್ತಮವಾಗಿತ್ತು. ಈ ವ್ಯವಸ್ಥೆಯು ಎಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸಿತು ಎಂಬುದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು ಎಂದು ತಿಳಿಸಿದರು.
ಕಳೆದ 37 ವರ್ಷಗಳಿಂದಲೂ ವಿವಿಧ ಕಚೇರಿಗಳಿಗೆ ಅಲೆದಾಡುತ್ತಿದ್ದೆ. ನನಗೆ ಹಂಚಿಕೆಯಾಗಿದ್ದ ನಿವೇಶನವು ಬೇರೊಬ್ಬರ ಹೆಸರಿನಲ್ಲಿ ನೋಂದಣಿಯಾಗಿತ್ತು ಮತ್ತು ಅವರು ಅಮೆರಿಕದಲ್ಲಿ ನೆಲೆಸಿದ್ದರಿಂದ, ಆ ಜಾಗದಲ್ಲಿ ಯಾವುದೇ ಕೆಲಸ ಮಾಡಲು ನನಗೆ ಕಷ್ಟವಾಗುತ್ತಿತ್ತು. ಪ್ರತಿ ಬಾರಿ ಬಿಡಿಎ (BDA) ಕಚೇರಿಗೆ ಭೇಟಿ ನೀಡಿದಾಗಲೂ ನನಗೆ ನಿರಾಶೆಯೇ ಎದುರಾಗುತ್ತಿತ್ತು. ಆದರೆ, 'ಓಪನ್ ಹೌಸ್ ಮೀಟಿಂಗ್' (OHM) ನಲ್ಲಿ ನನ್ನ ಸಮಸ್ಯೆಗೆ ತಕ್ಷಣವೇ ಪರಿಹಾರ ಸಿಕ್ಕಿತು ಎಂದು ಮತ್ತೊಬ್ಬ ಫಲಾನುಭವಿಯಾದ ಸೆಲ್ವ ಮುತ್ತು ಹೇಳಿದರು.
ಈ ವ್ಯವಸ್ಥೆಯನ್ನು ಸಂಪರ್ಕಿಸಿದವರಲ್ಲಿ ವಡೇರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ವಿಹಿತಾ ಬಿ.ಎಸ್. ಕೂಡ ಒಬ್ಬರು. ಸೆಪ್ಟೆಂಬರ್ 3 ರಂದು ನಡೆದ 'ಉತ್ತರ ವಲಯದ ಓಪನ್ ಹೌಸ್'ನಲ್ಲಿ, ಮೀಸಲಿರಿಸಿದ ಜಾಗವೊಂದನ್ನು ಸಂರಕ್ಷಿಸುವಂತೆ ಹಾಗೂ ಅದನ್ನು ಶಾಲಾ ಕಟ್ಟಡ ಮತ್ತು ಆಟದ ಮೈದಾನಕ್ಕಾಗಿ ಬಳಸುವಂತೆ ಕೋರಿ ಅವರು ಸ್ವತಃ ಬರೆದ ದೂರು ಅರ್ಜಿಯನ್ನು ಸಲ್ಲಿಸಿದರು. ಅವರ ದೂರಿನ ಕುರಿತು ಈಗ ಪರಿಶೀಲನೆ ನಡೆಯುತ್ತಿದೆ.
ಅನೇಕ ನಿವಾಸಿಗಳಿಗೆ, ಒಂದು ದೂರು ಎಂದರೆ ವರ್ಷಗಳ ಕಾಲದ ಕಾಯುವಿಕೆ, ಅನಿಶ್ಚಿತತೆ ಮತ್ತು ಹತಾಶೆಯ ಸಂಕೇತವಾಗಿರುತ್ತದೆ. 'ಓಪನ್ ಹೌಸ್' ಕಾರ್ಯಕ್ರಮವು ಅವರಿಗೆ ತಮ್ಮ ಸಮಸ್ಯೆಯನ್ನು ನೇರವಾಗಿ ಪ್ರಾಧಿಕಾರದ ಮುಂದೆ ವಿವರಿಸಲು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಅದಕ್ಕೆ ಸೂಕ್ತ ಪ್ರತಿಕ್ರಿಯೆ ಪಡೆಯಲು ಅವಕಾಶ ಕಲ್ಪಿಸುತ್ತದೆ ಎಂದು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹೇಳಿದರು.