ಪ್ರಿಯಾಂಕ್ ಖರ್ಗೆ  
ರಾಜ್ಯ

ಮಕ್ಕಳನ್ನು ಗುರಿಯಾಗಿಸಿ ಸಿದ್ಧಾಂತ ಹೇರಿಕೆ ಮಾಡಲಾಗುತ್ತಿದೆಯೇ..? ಅಪಾರ್ಟ್‌ಮೆಂಟ್‌ಗಳಲ್ಲಿ RSS ಸಭೆಗೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ..!

ಅಪಾರ್ಟ್‌ಮೆಂಟ್‌ಗಳ ಸಂಘಗಳು ತಮ್ಮ ವಸತಿ ಸಮುದಾಯಗಳಲ್ಲಿ ‘ಸೈದ್ಧಾಂತಿಕ ನೇಮಕಾತಿ ಮತ್ತು ಸಂಘಟಿತ ರಾಜಕೀಯ-ಸಾಮಾಜಿಕ ಪ್ರಭಾವ’ಕ್ಕೆ ಅವಕಾಶ ನೀಡಬೇಕೇ ಎಂಬುದನ್ನು ಪ್ರಶ್ನಿಸಬೇಕು.

ಬೆಂಗಳೂರು: ಐಟಿ ಹಬ್ ಬೆಂಗಳೂರಿನ ವಸತಿ ಸಮುಚ್ಚಯಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಆಯೋಜಿಸುತ್ತಿರುವ ಸಭೆಗಳು ಮತ್ತು ಪ್ರಚಾರ ಕಾರ್ಯಕ್ರಮಗಳ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಎರಡು ಪ್ರಮುಖ ಅಪಾರ್ಟ್‌ಮೆಂಟ್‌ಗಳಲ್ಲಿ "RSS ಪರಿಚಯ: ಅದರ ಗುರಿಗಳು ಮತ್ತು ಚಟುವಟಿಕೆಗಳು" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳ ಸಾಮಾಜಿಕ ಜಾಲತಾಣದ ಜಾಹೀರಾತುಗಳು ವೈರಲ್ ಆಗಿದ್ದವು. ಇದನ್ನು ಗಮನಿಸಿದ ಸಚಿವರು, ಅಪಾರ್ಟ್‌ಮೆಂಟ್‌ಗಳನ್ನು ಇಂತಹ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಗರದ ಎರಡು ಅಪಾರ್ಟ್‌ಮೆಂಟ್‌ಗಳ ನಿವಾಸಿಗಳ ನಡುವೆ ಹಂಚಿಕೆಯಾಗಿದ್ದ ಆಹ್ವಾನದಲ್ಲಿ ‘ಆರ್‌ಎಸ್‌ಎಸ್ ಪರಿಚಯ: ಅದರ ಗುರಿಗಳು, ಚಟುವಟಿಕೆಗಳು, ಕಾರ್ಯವೈಖರಿ’ ಎಂಬ ವಿಷಯದ ಕುರಿತು ಸಂಜೆ 6ರಿಂದ 7ರವರೆಗೆ ಸಂವಾದ ಆಯೋಜಿಸಲಾಗಿದೆ ಎಂದು ತಿಳಿಸಲಾಗಿತ್ತು.

ಆರ್‌ಎಸ್‌ಎಸ್‌ನ ಕರ್ನಾಟಕ ದಕ್ಷಿಣ ಸಹಸಂಪರ್ಕ ಪ್ರಮುಖ್ ಎಂದು ಪರಿಚಯಿಸಲಾಗಿರುವ ಹರೀಶ್ ರಾವ್ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ ಎಂದು ಆಹ್ವಾನದಲ್ಲಿ ಉಲ್ಲೇಖಿಸಲಾಗಿತ್ತು.

ಆರ್‌ಎಸ್‌ಎಸ್‌ನ ದೃಷ್ಟಿಕೋನ, ಕಾರ್ಯವೈಖರಿ ಹಾಗೂ ‘ಬಲಿಷ್ಠ, ಒಗ್ಗಟ್ಟಿನ ಮತ್ತು ಸ್ವಾವಲಂಬಿ ಭಾರತ’ ನಿರ್ಮಾಣಕ್ಕೆ ಸಂಘಟನೆಯ ಕೊಡುಗೆ ಕುರಿತು ತಿಳಿದುಕೊಳ್ಳಲು ಕಾರ್ಯಕ್ರಮ ನೆರವಾಗಲಿದೆ ಎಂದು ಹೇಳಲಾಗಿತ್ತು.

ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ ಅವರು, ಅಪಾರ್ಟ್‌ಮೆಂಟ್‌ಗಳ ಸಂಘಗಳು ತಮ್ಮ ವಸತಿ ಸಮುದಾಯಗಳಲ್ಲಿ ‘ಸೈದ್ಧಾಂತಿಕ ನೇಮಕಾತಿ ಮತ್ತು ಸಂಘಟಿತ ರಾಜಕೀಯ-ಸಾಮಾಜಿಕ ಪ್ರಭಾವ’ಕ್ಕೆ ಅವಕಾಶ ನೀಡಬೇಕೇ ಎಂಬುದನ್ನು ಪ್ರಶ್ನಿಸಬೇಕು ಎಂದು ಹೇಳಿದ್ದಾರೆ.

ನಿವಾಸಿಗಳು ಹಾಗೂ ಅವರ ಮಕ್ಕಳನ್ನು ತಲುಪಲು ಬಯಸುವ ಯಾವುದೇ ಸಂಘಟನೆ ತನ್ನ ಕಾನೂನುಬದ್ಧ ಸ್ಥಾನಮಾನ, ಹಣಕಾಸು, ಸಂಘಟನಾ ರಚನೆ ಹಾಗೂ ಹೊಣೆಗಾರಿಕೆಯ ಬಗ್ಗೆ ಪಾರದರ್ಶಕವಾಗಿರಬೇಕು ಎಂದು ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ನ ಕಾನೂನುಬದ್ಧ ಸ್ಥಾನಮಾನದ ವಿಚಾರವಾಗಿ ಖರ್ಗೆ ಈ ಹಿಂದೆ ಕೂಡ ಹಲವು ಬಾರಿ ಪ್ರಶ್ನೆಗಳನ್ನು ಎತ್ತಿದ್ದಾರೆ.

ಆರ್‌ಎಸ್‌ಎಸ್ ಸೊಸೈಟಿ, ಟ್ರಸ್ಟ್ ಅಥವಾ ಕಂಪನಿಯಾಗಿ ನೋಂದಣಿಯಾಗಿಲ್ಲ; ‘ವ್ಯಕ್ತಿಗಳ ಸಮೂಹ’ವಾಗಿ ಕಾನೂನುಬದ್ಧವಾಗಿ ಗುರುತಿಸಲ್ಪಟ್ಟಿದೆ ಎಂಬುದು ಅವರ ವಾದವಾಗಿದೆ.

ಈ ಕುರಿತು ಅವರು ಆರ್‌ಎಸ್‌ಎಸ್‌ನ ಕಾನೂನು ಸ್ಥಾನಮಾನ, ಆಸ್ತಿ, ಹಣಕಾಸು ಹಾಗೂ ಲೆಕ್ಕಪತ್ರಗಳ ಬಗ್ಗೆ ಸಾರ್ವಜನಿಕವಾಗಿ ವಿವರ ನೀಡುವಂತೆ ಒತ್ತಾಯಿಸಿದ್ದಾರೆ.

ಜೂನ್‌ನಲ್ಲಿ ಖರ್ಗೆ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಸಂಘಟನೆಯ ಕಾನೂನು ಸ್ಥಾನಮಾನ, ರಚನೆ, ಹಣಕಾಸಿನ ಮೂಲಗಳು, ವೆಚ್ಚ ಹಾಗೂ ಹೊಣೆಗಾರಿಕೆ ಸೇರಿದಂತೆ ಹಲವು ವಿವರಗಳನ್ನು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಭಾಗವತ್, ಆರ್‌ಎಸ್‌ಎಸ್‌ಗೆ ನೋಂದಣಿ ಅಗತ್ಯವಿಲ್ಲ ಎಂದು ಹೇಳಿದ್ದರು.

ಸರ್ಕಾರಿ ಆವರಣಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೂಡ ಖರ್ಗೆ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಬೆಂಬಲಿಗರಿಂದ ಖರ್ಗೆ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.

ಸಚಿವರ ಅಧಿಕಾರ ವ್ಯಾಪ್ತಿ ಹಾಗೂ ಅವರ ನಿರಂತರ ಟೀಕೆಗಳನ್ನು ಪ್ರಶ್ನಿಸಿರುವ ಬಿಜೆಪಿ ನಾಯಕರು, ಮುಖ್ಯಮಂತ್ರಿ ಅಥವಾ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರದ ಖರ್ಗೆ ತಮ್ಮನ್ನು ‘ಸೂಪರ್ ಸಿಎಂ’ ಎಂದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಆರ್‌ಎಸ್‌ಎಸ್‌ನ ಕಾನೂನು ಸ್ಥಾನಮಾನ ಹಾಗೂ ಹೊಣೆಗಾರಿಕೆ ಕುರಿತು ಖರ್ಗೆ ಮತ್ತು ಬಿಜೆಪಿ-ಆರ್‌ಎಸ್‌ಎಸ್ ನಾಯಕರ ನಡುವೆ ಕಳೆದ ಕೆಲವು ತಿಂಗಳುಗಳಿಂದ ಸಾರ್ವಜನಿಕ ಹೇಳಿಕೆಗಳ ಮೂಲಕ ವಾಗ್ವಾದ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯ ಸಂಘರ್ಷ: ಮಧ್ಯಾವಧಿ ಚುನಾವಣೆಗೂ ಮುನ್ನ ಇರಾನ್ ಮೇಲೆ ಅಮೆರಿಕ ದಾಳಿ?: ಟ್ರಂಪ್ ಸ್ಫೋಟಕ ಹೇಳಿಕೆ..!

ಗ್ರಾಹಕರಿಗೆ ಗುಡ್‌ನ್ಯೂಸ್: ಪ್ರಸ್ತಾವಿತ ಬ್ಯಾಂಕ್ ಮುಷ್ಕರ ಮುಂದೂಡಿಕೆ, IBA- UFBU ಮಾತುಕತೆ ಬಳಿಕ ಮಹತ್ವದ ನಿರ್ಧಾರ

BDA 100ನೇ 'ಓಪನ್ ಹೌಸ್' ಸಭೆ: ನಿವಾಸಿಗಳಿಂದ ಉತ್ತಮ ಪ್ರತಿಕ್ರಿಯೆ!

LPU ಕ್ಯಾಂಪಸ್‌ನಲ್ಲಿ ಮತ್ತೆ ಹಿಂಸಾಚಾರ: ಪೊಲೀಸ್ ವಾಹನಗಳಿಗೆ ಬೆಂಕಿ, ಪೊಲೀಸರಿಗೆ ಗಾಯ, ತನಿಖೆಗೆ SIT ರಚನೆ!

ಅಕ್ಟೋಬರ್ 7 ರ ದಾಳಿಯ ಮೊದಲು ಹಮಾಸ್‌ ಎಚ್ಚರಿಕೆ ನೀಡಿತ್ತು: ಇಸ್ರೇಲ್‌ನ ಮಾಜಿ ರಕ್ಷಣಾ ಸಚಿವ ಸ್ಫೋಟಕ ಮಾಹಿತಿ