ರೈತರು 
ರಾಜ್ಯ

Bidadi Township ಯೋಜನೆಗೆ ವಿರೋಧ: ಹೆದ್ದಾರಿ ಬಂದ್ ಮಾಡಿದ ರೈತರಿಗೆ ಶಾಕ್; ಪೊಲೀಸರಿಂದ 'Suo motu' FIR ದಾಖಲು..!

ಅನುಮತಿ ಪಡೆಯದೆ ರಸ್ತೆ ತಡೆದು ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು: ಪ್ರಸ್ತಾವಿತ 'ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್' (GBIT) ಯೋಜನೆ ವಿರೋಧಿಸಿ ಬಿಡದಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಪೊಲೀಸರು ಶಾಕ್ ನೀಡಿದ್ದಾರೆ.

ಬಿಡದಿ-ಹಾರೋಹಳ್ಳಿ ರಾಜ್ಯ ಹೆದ್ದಾರಿ (SH-265) ಸಂಪೂರ್ಣ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ಐದು ಮಹಿಳೆಯರು ಸೇರಿದಂತೆ ಒಟ್ಟು 15 ರೈತರ ವಿರುದ್ಧ ಬಿಡದಿ ಪೊಲೀಸರು ಸ್ವಯಂಪ್ರೇರಿತ (ಸುಮೊಟೊ) ಎಫ್‌ಐಆರ್ ದಾಖಲಿಸಿದ್ದಾರೆ.

ಅನುಮತಿ ಪಡೆಯದೆ ರಸ್ತೆ ತಡೆದು ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಬಿಡದಿ ಪೊಲೀಸ್ ಠಾಣೆಯ ಪಿಎಸ್‌ಐ ದೇವರಾಜ ಅವರು ಸೆಪ್ಟೆಂಬರ್ 25ರಂದು ನೀಡಿದ ದೂರಿನ ಪ್ರಕಾರ, ಪ್ರಸ್ತಾವಿತ ಜಿಬಿಐಟಿ ಯೋಜನೆಗಾಗಿ ಬಿಡದಿ ಹೋಬಳಿಯ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಕೃಷಿ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿದೆ.

ಈ ಯೋಜನೆಯನ್ನು ವಿರೋಧಿಸಿ ರೈತರು ಸುಮಾರು 18 ತಿಂಗಳಿಂದ ಬೈರಮಂಗಲ ವೃತ್ತದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ ವರದಿ ಪಡೆಯಲಾಗುವುದು ಎಂದು ಸರ್ಕಾರ ಈ ಹಿಂದೆ ತಿಳಿಸಿತ್ತು. ಆದರೆ, ಈವರೆಗೆ ಯಾವುದೇ ವರದಿ ಸಲ್ಲಿಕೆಯಾಗಿಲ್ಲ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ಕಚೇರಿ ಮೂಲಕವೂ ಸರ್ಕಾರದಿಂದ ಯಾವುದೇ ಮಾಹಿತಿ ತಮಗೆ ದೊರೆತಿಲ್ಲ ಎಂದು ರೈತರು ದೂರಿದ್ದಾರೆ.

ಜಿಬಿಡಿಎ ಕಚೇರಿಯಲ್ಲಿನ ಅಕ್ರಮಗಳನ್ನು ನಿಲ್ಲಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರೈತರು ಸೆಪ್ಟೆಂಬರ್ 21ರಿಂದ ಬೈರಮಂಗಲ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಪ್ರತಿಭಟನಾಕಾರರು ಅನುಮತಿ ಪಡೆಯದೆ ಬಿಡದಿ-ಹಾರೋಹಳ್ಳಿ ಮುಖ್ಯರಸ್ತೆಯನ್ನು ತಡೆದು, ರಸ್ತೆಯಲ್ಲಿ ಕುರ್ಚಿಗಳನ್ನು ಹಾಕಿಕೊಂಡು ಕುಳಿತಿದ್ದರು. ಕೆಲವರು ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಟ್ರ್ಯಾಕ್ಟರ್‌ಗಳು ಹಾಗೂ ಎತ್ತಿನಗಾಡಿಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ, ಜಾನುವಾರುಗಳನ್ನು ಕಟ್ಟಿ ಹಾಕಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಸೆಪ್ಟೆಂಬರ್ 21ರಂದು ಬೆಳಗ್ಗೆ 10 ಗಂಟೆಗೆ ಆರಂಭವಾದ ಪ್ರತಿಭಟನೆ ಸೆಪ್ಟೆಂಬರ್ 25ರವರೆಗೆ ಮುಂದುವರಿದಿತ್ತು.

ಬಿಡದಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣ

ರಾಜ್ಯ ಹೆದ್ದಾರಿ 265ರ ಪ್ರಮುಖ ಮಾರ್ಗವಾಗಿರುವ ಈ ರಸ್ತೆಯು ಕೈಗಾರಿಕಾ ಪ್ರದೇಶದ ಮೂಲಕ ಹಾದುಹೋಗುತ್ತದೆ. ಬೈರಮಂಗಲ ವೃತ್ತದಲ್ಲಿ ರಸ್ತೆ ತಡೆದಿದ್ದರಿಂದ ಸಾರ್ವಜನಿಕರು, ಶಾಲಾ ಮಕ್ಕಳು, ಉದ್ಯೋಗಿಗಳು ಹಾಗೂ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯರು ಸೇರಿದಂತೆ ಸಾರ್ವಜನಿಕರನ್ನು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದ ಆರೋಪವೂ ಪ್ರತಿಭಟನಾಕಾರರ ಮೇಲಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 126 (ತಪ್ಪಾದ ರೀತಿಯಲ್ಲಿ ತಡೆಹಿಡಿಯುವುದು), 54 (ಅಪರಾಧ ನಡೆಯುವ ಸಂದರ್ಭದಲ್ಲಿ ಪ್ರಚೋದಕ ಸ್ಥಳದಲ್ಲಿರುವುದು) ಹಾಗೂ 190 (ಕಾನೂನುಬಾಹಿರ ಸಭೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಚಿಕ್ಕಬೈರಮಂಗಲದ ಗಿರೀಶ್ ಹಾಗೂ ನಾಗೇಶ್, ಹೊಸೂರಿನ ಶ್ವೇತಾ, ಭೈರಪ್ಪ, ಚೇತನ್, ಚಂದ್ರಶೇಖರ್, ಶಿವರುದ್ರಪ್ಪ ಹಾಗೂ ವೀರೇಶ್, ಕಲ್ಲುಗೋಪಹಳ್ಳಿಯ ಪುಟ್ಟಸ್ವಾಮಯ್ಯ, ಕೆಂಪಶೆಟ್ಟಿದೊಡ್ಡಿಯ ಕೃಷ್ಣಪ್ಪ, ಮಂಡಲಹಳ್ಳಿಯ ನಾಗರಾಜು, ಕೋಡಿಹಳ್ಳಿಯ ಜಯಮ್ಮ, ಕಂಚುಗಾರನಹಳ್ಳಿಯ ಜಯಲಕ್ಷ್ಮೀ, ಮಂಡಲಹಳ್ಳಿದೊಡ್ಡಿಯ ಭಾಗ್ಯ ಹಾಗೂ ಬನ್ನಿಗಿರಿಯ ನೀತಾ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯ ಸಂಘರ್ಷ: ಮಧ್ಯಾವಧಿ ಚುನಾವಣೆಗೂ ಮುನ್ನ ಇರಾನ್ ಮೇಲೆ ಅಮೆರಿಕ ದಾಳಿ?: ಟ್ರಂಪ್ ಸ್ಫೋಟಕ ಹೇಳಿಕೆ..!

ಗ್ರಾಹಕರಿಗೆ ಗುಡ್‌ನ್ಯೂಸ್: ಪ್ರಸ್ತಾವಿತ ಬ್ಯಾಂಕ್ ಮುಷ್ಕರ ಮುಂದೂಡಿಕೆ, IBA- UFBU ಮಾತುಕತೆ ಬಳಿಕ ಮಹತ್ವದ ನಿರ್ಧಾರ

BDA 100ನೇ 'ಓಪನ್ ಹೌಸ್' ಸಭೆ: ನಿವಾಸಿಗಳಿಂದ ಉತ್ತಮ ಪ್ರತಿಕ್ರಿಯೆ!

LPU ಕ್ಯಾಂಪಸ್‌ನಲ್ಲಿ ಮತ್ತೆ ಹಿಂಸಾಚಾರ: ಪೊಲೀಸ್ ವಾಹನಗಳಿಗೆ ಬೆಂಕಿ, ಪೊಲೀಸರಿಗೆ ಗಾಯ, ತನಿಖೆಗೆ SIT ರಚನೆ!

ಅಕ್ಟೋಬರ್ 7 ರ ದಾಳಿಯ ಮೊದಲು ಹಮಾಸ್‌ ಎಚ್ಚರಿಕೆ ನೀಡಿತ್ತು: ಇಸ್ರೇಲ್‌ನ ಮಾಜಿ ರಕ್ಷಣಾ ಸಚಿವ ಸ್ಫೋಟಕ ಮಾಹಿತಿ