ಖುಷಿ

ಗರ್ಭದಲಿ ಇದೇನಿದು!

ಇಂದು ಯಾರಲ್ಲೂ ಸಮಯವಿಲ್ಲ. ಸಮಯ ನೋಡಲು ಕೂಡಾ ಸಮಯವಿಲ್ಲ! 'ಅಯ್ಯೋ, ಸುಮ್ನೆ ಟೈಮ್ ವೇಸ್ಟ್ ಆಯ್ತಲ್ಲ' ಎಂದು ಮರುಗುವವರನ್ನು ನಿತ್ಯವೂ ನಮ್ಮ ನಡುವೆ ನೋಡುತ್ತಿರುತ್ತೇವೆ. ಹೀಗಿರುವಾಗ ಇದೇ 'ಟೈಮ್‌ಸೆನ್ಸ್‌' ಮೇಲೆ ನೌಷಿಲ್ ಮೆಹ್ತಾ ಅವರು ಹಿಂದಿಯಲ್ಲಿ ಬರೆದ 'ರಬಿ'್ಡ ಎಂಬ ಸಣ್ಣ ಕಥೆಯನ್ನು ನಿತೀಶ್ ಮತ್ತು ಹೇಮಲತಾ ಲೋಕೇಶ್ ಕೂಡಿ ಕನ್ನಡದಲ್ಲಿ ರಂಗರೂಪಕ್ಕೆ 'ರಬಿ'್ಡ ಹೆಸರಿನಿಂದಲೇ ತಂದಿದ್ದಾರೆ. ಈ ನಾಟಕವನ್ನು ನಿತೀಶ್ ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲೂ ಗಮನ ಸೆಳೆದಿದ್ದಾರೆ.
ಅವಳು ಸಾವಂತ್ರಿ ಎಂಬ ಹಳ್ಳಿ ಹೆಂಗಸು. ತನ್ನ ವಿಕಲಚೇತನ ಮಗಳ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸಲು 'ಪರೋಪಕಾರಾರ್ಥಂ ಇದಂ ಶರೀರಂ' ಎಂಬ ನುಡಿಯನ್ನು ಮೈಗೂಡಿಸಿಕೊಂಡು ಪರರ ಸಂತೋಷಕ್ಕಾಗಿ ಕೃತಕ ಗರ್ಭ ಧರಿಸುತ್ತಾಳೆ. ಪಾತ್ರದ ಸೃಷ್ಟಿಯೇ ನಾಟಕದ ಜೀವಾಳ. ಬಸುರಾಗದೇ ತಾಯಿಯಾಗ ಬಯಸುವ ಐಟಿಯ ನೌಕರಣಿ ಮತ್ತು ಸಾವಂತ್ರಿಯ ಸಂವೇದನಾತ್ಮಕ ದೃಶ್ಯಗಳು ಮನಕಲಕುತ್ತವೆ.
ಭಾವುಕತೆ ಹಾಗೂ ಆರ್ದ್ರತೆಯನ್ನು ಸ್ಫುರಿಸಲು ಸಾಕಷ್ಟು ಪ್ರಸಂಗಗಳಿವೆ. ಸಾವಂತ್ರಿಯ ಉದರದಲ್ಲಿನ ತನ್ನ ಗಂಡನ ಕುಡಿಯನ್ನು ನೇವರಿಸುತ್ತಾ ಈಕೆ ತನ್ನ ಉದರ ಸ್ಪರ್ಶಿಸಿಕೊಳ್ಳುವ ದೃಶ್ಯ ವಿಶ್ಲೇಷಣೆಗೆ ನಿಲುಕದ್ದು. ವೈಜ್ಞಾನಿಕವಾಗಿ ಮುಂದುವರಿದ ಸಮಾಜ ಹಾಗೂ ತನ್ನ ಕುಡಿ, ತನ್ನ ಬೇರು ಎಂಬ ಅವಿನಾಭಾವ ತೋರುವ ಮುಗ್ಧ ಸಮಾಜದ ನಡುವಿನ ಸೇತುವೆಯೇ ಈ ನಾಟಕದ ಮೂಲ ವಸ್ತು. ಇಲ್ಲಿನ ಸಾವಂತ್ರಿಯ ಭಾಷೆ, ಮುಗ್ಧತನ, ಹಾವಭಾವಗಳು ನಾಟಕದ ಕೊನೆಯ ಘಟ್ಟದವರೆಗೂ ಹಾಸ್ಯಮಿಶ್ರಿತವಾಗಿಯೇ ಸಾಗಿ ನಾಟಕದ ಅಂತಿಮ ಕ್ಷಣಗಳಲ್ಲಿ ಆಕೆಯ ಪಾತ್ರ ಉತ್ತುಂಗಕ್ಕೆ ಸಾಗುತ್ತದೆ. ಅಲ್ಲಿ ಮಾನವತಾವಾದವನ್ನು ಸಾರುತ್ತಾಳೆ.
'ಸೋ ಕಾಲ್ಡ್, ಹೈಫೈ ಪೀಪಲ್‌' ಬೇಡವೆಂದು ಬಿಟ್ಟು ಹೋದ ಈಕೆಯ ಭಾಷೆಯಲ್ಲಿನ 'ಸ್ಪೆಶಲ್‌' ಆದ ಮಗುವನ್ನು ಆತುಕೊಂಡು ಸಾಕುತ್ತಾಳೆ. ನೋಡುಗನ ಮನದಲ್ಲಿ ಸಾವಂತ್ರಿಯ ಪಾತ್ರ ಅಚ್ಚಳಿಯದೇ ಅಚ್ಚಾಗುತ್ತದೆ. ವಿಕಲಚೇತನ ಹುಡುಗಿ ಪುಟ್ಟಕ್ಕ, 'ನಿನ್ನ ಹೊಟ್ಟೇಲಿರೋ ಪಾಪು ನಮ್ಮದಲ್ವಾ? ನನ್ನ ಜೊತೆಗಿರೊಲ್ವಾ?' ಎಂಬರ್ಥದ ಮಾತುಗಳನ್ನಾಡುತ್ತಾ ತನ್ನ ಪಾತ್ರದಲ್ಲಿ ತಾನು ತಲ್ಲೀನಳಾಗಿದ್ದಾಳೆ. ನಾಟಕದ ಪ್ರಾರಂಭದಿಂದಲೂ ಪೂರಕವಾಗಿ ಬರುವ ಸಂಗೀತ ಹಾಗೂ ಹಾಡುಗಾರ್ತಿಯ ದನಿ ಇಂಪಾಗಿಯೂ, ಸುಶ್ರಾವ್ಯವಾಗಿಯೂ ಇದೆ. ಆದರೆ ಹಾಡಿನ ಸಾಹಿತ್ಯ ಕಥೆಗೆ ಹೊಂದಾಣಿಕೆಯಾಗದೆ ಹಿನ್ನೆಲೆಯ ಹಾಡಾಗಿ ಉಳಿದಿದೆ.
ಐಟಿಬಿಟಿಯ ನೌಕರರ ಪರದಾಟ, ಯಾಂತ್ರಿಕ ಬದುಕು, ಹಣಕ್ಕಷ್ಟೇ ಬೆಲೆ, ತಮ್ಮ ಇಡೀ ಸಮಯವನ್ನೆಲ್ಲ ಕಂಪನಿಗಾಗಿ ಮುಡಿಪಿಟ್ಟಿರುವವರ ಪರಿಯನ್ನು ಇಲ್ಲಿ ಹಿಡಿದಿಡಲಾಗಿದೆ. ನಾಯಕನ ಕೈಗೆ ಹಾಗೂ ಸಾವಂತ್ರಿಯ ಕಾಲಿಗೆ ಮೊದಲಿಂದ ಕೊನೆಯವರೆಗೂ ಕ್ರೇಪ್ ಬ್ಯಾಂಡೇಜ್ ಏಕೆಂಬುದೇ ಯಕ್ಷಪ್ರಶ್ನೆ. ಹಿತಮಿತವಾದ ರಂಗಸಜ್ಜಿಕೆ, ಬೆಳಕು, ಪ್ರಸಾದನಗಳಲ್ಲೇ ನಾಟಕಪ್ರಿಯರನ್ನು ಪ್ರಥಮ ಪ್ರದರ್ಶನದಿಂದಲೇ ಸೆಳೆಯಲು ಕಥಾ ಹಂದರವೇ ಮೂಲ ಕಾರಣ ಎಂಬುದು ನೋಡುಗನ ನುಡಿ.
-ಸಂಕೇತ್ ಗುರುದತ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT