ಗೆಳೆಯರಿಗೆ ಸೀಕ್ರೆಟ್ ಮೆಸೇಜ್ ಕೊಡಬೇಕೇ? ಇಲ್ಲೊಂದು ಉಪಾಯವಿದೆ.
ಬೇಕಾಗುವ ಸಾಮಾಗ್ರಿಗಳು
ನಿಂಬೆಹಣ್ಣು
ಸ್ವಲ್ಪ ನೀರು
ಚಮಚ
ಹತ್ತಿಯ ಬಡ್
ಲೈಟ್ ಬಲ್ಬ್ ಅಥವಾ ಲ್ಯಾಂಪ್
ಬಿಳಿಯ ಕಾಗದ
ವಿಧಾನ
ನಿಂಬೆಹಣ್ಣಿನ ರಸವನ್ನು ಬಟ್ಟಲಿಗೆ ಹಿಂಡಿ ಚೂರೇ ಚೂರು ನೀರನ್ನು ಸೇರಿಸಿ ಚಮಚದಿಂದ ಚೆನ್ನಾಗಿ ಕದಡಿ. ಈ ಮಿಶ್ರಣಕ್ಕೆ ಹತ್ತಿಯ ಬಡ್ ಅದ್ದಿ ಬಿಳಿ ಹಾಳೆಯ ಮೇಲೆ ಬರೆಯಬೇಕೆನಿಸಿದ್ದನ್ನು ಬರೆದು ಗಾಳಿಗೆ ಇಡಿ. ಪೂರ್ತಿ ಒಣಗಿದ ಮೇಲೆ ಏನು ಬರೆದಿದ್ದೀರೆಂದು ಕಾಣುವುದಿಲ್ಲ. ಈಗ ಯಾರು ಮೆಸೇಜ್ ಓದಬೇಕೋ ಅವರಿಗೆ ಬಿಸಿಯಾದ ಬಲ್ಬ್ ಇಲ್ಲವೇ ಲ್ಯಾಂಪ್‌ನ ಬಳಿ ಹಿಡಿದು ನೋಡಲು ಹೇಳಿ. ನೀವು ಬರೆದ ಮೆಸೇಜ್ ಅಲ್ಲಿ ಮೂಡುತ್ತದೆ!
ಕಾರಣ
ನಿಂಬೆ ಜ್ಯೂಸ್ ಜೈವಿಕ ವಸ್ತುವಾಗಿರುವುದರಿಂದ ಬಿಸಿ ಮಾಡಿದಾಗ ಆಮ್ಲಜನಕದೊಂದಿಗೆ ಸೇರಿ ಕಾಫಿ ಬಣ್ಣಕ್ಕೆ ತಿರುಗುತ್ತದೆ. ಇದನ್ನು ನೀರಿನೊಂದಿಗೆ ಸೇರಿಸುವುದರಿಂದ ಡೈಲ್ಯೂಟ್ ಆಗಿ, ಯಾರಿಗೂ ನೀವು ಬರೆದಿದ್ದೇನೆಂದು ಬಿಸಿ ಮಾಡುವವರೆಗೂ ತಿಳಿಯುವುದಿಲ್ಲ. ವಿನೆಗರ್, ವೈನ್, ಆರೆಂಜ್ ಜ್ಯೂಸ್, ಹಾಲು, ಜೇನು ಎಲ್ಲವನ್ನೂ ಸೀಕ್ರೆಟ್ ಮೆಸೇಜ್‌ನ ಇಂಕ್ ಆಗಿ ಬಳಸಬಹುದು.
ಹ್ಯಾರಿ ಪಾಟರ್ ಪಜಲ್
ಇಂದಿಗೂ ವಿಶ್ವದ ತುಂಬ ಹ್ಯಾರಿ ಪಾಟರ್ ಅಭಿಮಾನಿಗಳು ಲಕ್ಷಲಕ್ಷ ಸಂಖ್ಯೆಯಲ್ಲಿದ್ದಾರೆ. ಟಾಮ್ ಪಿಯಸರ್ ಎಂಬ ಕೌಶಲ್ಯಪೂರ್ಣ ರೈತ ಹ್ಯಾರಿ ಪಾಟರ್ ಸರಣಿಯ ಕೊನೆಯ ಸಿನಿಮಾ 'ಡೆತ್ಲಿ ಹಾಲೋಸ್- ಭಾಗ 2' ಬಿಡುಗಡೆಯಾಗಿರುವುದನ್ನು ವಿಶಿಷ್ಟವಾಗಿ ಆಚರಿಸಿದ್ದಾನೆ. ಹ್ಯಾರಿ ಪಾಟರ್ ಸಿನಿಮಾದ ನಾಯಕ ನಟನ ಚಿತ್ರವನ್ನು ತನ್ನ ಹೊಲದಲ್ಲಿ ಅತ್ಯಂತ ಕಲಾತ್ಮಕವಾಗಿ ಬೆಳೆಸಿದ್ದಾನೆ. ಇದಕ್ಕಾಗಿ ಎಲ್ವಿಂಗ್ಟನ್‌ನಲ್ಲಿರುವ ತನ್ನ ಜೋಳದ ಹೊಲದಲ್ಲಿ ತಲಾ 50 ಮೀಟರ್‌ನಷ್ಟು ದೊಡ್ಡದಾದ ಡೆನಿಯಲ್ ರ್ಯಾಡ್ ಕ್ಲಿಫ್(ಹ್ಯಾರಿ ಪಾಟರ್ ಪಾತ್ರಧಾರಿ)ನ ಎರಡು ಬೃಹತ್ ಪ್ರತಿಕೃತಿಗಳನ್ನು ನಿರ್ಮಿಸಿ, ಇವೆರಡರ ನಡುವೆ ವ್ಯತ್ಯಾಸ ಗುರುತಿಸಿ ಎಂಬ ಸ್ಪರ್ಧೆ ಒಡ್ಡಿದ್ದಾನೆ. ಇದಕ್ಕಾಗಿ ಒಂದು ಮಿಲಿಯನ್‌ಗಿಂತ ಹೆಚ್ಚು ಜೋಳದ ಗಿಡಗಳನ್ನು ಈತ ಬಳಸಿಕೊಂಡಿದ್ದಾನೆ! ಜೋಳದ ಹೊಲದಲ್ಲಿ ಅತ್ಯಂತ ವಿಶಿಷ್ಟ ರೀತಿಯಲ್ಲಿ ಮೂಡಿರುವ ಚಿತ್ರವು ಗಿನ್ನಿಸ್ ದಾಖಲೆಗೆ ಸಜ್ಜಾಗಿ ನಿಂತಿದೆ.
-ವಿದ್ಯಾ ವಿ.ಹಾಲಭಾವಿ