'ರಷ್ಯಾದಿಂದ ಹಿಡಿದು ದಕ್ಷಿಣ ಅಮೆರಿಕಾದವರೆಗೂ ನೂರಾರು ಬರಹಗಾರರು ನಿರಂಕುಶ ಪ್ರಭುತ್ವಗಳ ಕೈಯಲಲಿ ಸಿಕ್ಕು ಸೆರೆಯಾಗಿದ್ದಾರೆ. ಅಂಥದರ ನಡುವೆಯೂ ಕೆಲವರು ಆ ಬಗ್ಗೆ ಬೆಳಕು ಚೆಲ್ಲುವುದನ್ನು ಮುಂದುವರಿಸಿದ್ದಾರೆ. ಪ್ರಭುತ್ವ ಹತ್ತಿಕ್ಕುವುದಕ್ಕೆ ಪ್ರಯತ್ನಿಸಿದಷ್ಟೂ ಆತ ಘನೀಭವಿಸುತ್ತಾನೆ. ಸಾಗರದ ಅಲೆಗಳು ಮೀನುಗಾರರ ಬದುಕನ್ನು ಪ್ರಭಾವಿಸಿದ ಹಾಗೆ, ಸಮಾಜದ ವಿಪ್ಲವಗಳು ಸಾಹಿತಿಯ ನೋಟವನ್ನು ಪಲ್ಲಟಿಸುತ್ತವೆ.
ಬರಹಗಾರನಿಗೊಂದು ದ್ವಂದ್ವವಿದೆ. ಆತ ಕೆಲವೊಮ್ಮೆ ಪ್ರಭುತ್ವದ ಕಣ್ಣಲ್ಲಿ ಸ್ವಾಮಿದ್ರೋಹಿಯಾಗಬೇಕಾಗಬಹುದು. ಇನ್ನು ಹಲವೊಮ್ಮೆ ಸ್ವತಂತ್ರ ಚಳವಳಿಗಾರರ ಕಣ್ಣಲ್ಲಿ ಪ್ರಭುತ್ವಪರನೆನ್ನಿಸಿಕೊಳ್ಳಬಹುದು. ಮನುಷ್ಯಜೀವಿಯಾಗಿ ಆತನೆಂದೂ 'ಬ್ಯಾಲೆನ್ಸ್'ನಿಂದಿರುವುದೆಂಬುದು ಸುಳ್ಳು. ಈ ಕುರಿತು ಸಾಹಿತಿಯಾಗಿ, ಹೋರಾಟಗಾರನಾಗಿ ನಮ್ಮ ಮಾರ್ಕೇಸ್ ಹೇಳಿದ ಮಾತುಗಳನ್ನು ಸಾರಾಂಶೀಕರಿಸಬಹುದು. ಶತ್ರು ಹಾಗೂ ಮಿತ್ರ- ಇಬ್ಬರಿದ್ದಾಗಲೂ ಸತ್ಯವನ್ನು ಶೋಧಿಸುವ ಕೆಲಸದಿಂದಲಷ್ಟೇ ಸಾಹಿತಿಗೆ ಸಮಾಧಾನ. ಆಗಲಷ್ಟೇ ಆತನಿಗೆ ಅಸ್ತಿತ್ವದ ಅರಿವು. 'ಮುಖಗಳು ಪರಸ್ಪರರ ಪುಟಗಳು, ಕಣ್ಣುಗಳು ಪರಸ್ಪರರ ಪದಗಳು, ಅಷ್ಟು ತಿಳಿಯಲು ನಮಗೆ ಜೀವನವೇ ಬೇಕಾಯಿತು...' ಎಂಬುದು ದಕ್ಷಿಣ ಆಫ್ರಿಕದ ಕವಿ ಮೊಂಗಾನೆ ಸೆರೋಟೆಯ ಸಾಲುಗಳು.
ಬರಹಗಾರ ತನ್ನ ದೌರ್ಬಲ್ಯ, ಪ್ರಭುತ್ವದ ಮೇಲಿನ ನಿಷ್ಠೆಗಳ ವಿರುದ್ಧವೇ ಪದಗಳನ್ನು ಬಳಸಬಲ್ಲವನಾಗಿದ್ದರೆ ಮಾತ್ರ ಆತ ಮಾನವ ಕುಲದ ಸೇವಕನೆನಿಸಿಕೊಳ್ಳುತ್ತಾನೆ. ಸತ್ಯದ ಚೆಲ್ಲಾಚೆದುರಾದ ಚೂರುಗಳೇ ಎಲ್ಲ ಪದಗಳ ಅಂತಿಮ ಪದಗಳು. ಅದು ನಮ್ಮ ಸುಳ್ಳುಗಳಿಂದ ಕದಲದು, ಮಾತಿನ ಹಂದರಗಳಲ್ಲಿ ಮರೆಯಾಗದು. ಜಾತೀಯತೆ, ಲಿಂಗಭೇದ, ಪೂರ್ವಗ್ರಹ, ವೈಭವ, ಮುಖಸ್ತುತಿಗಳಿಂದ ಕೊಳಕಾಗದು.'
ಮೊನ್ನೆ ಮೊನ್ನೆಯಷ್ಟೇ ತೀರಿಕೊಂಡ ದಕ್ಷಿಣ ಅಮೆರಿಕದ ಸಾಹಿತಿ ನಾದಿನ್ ಗಾರ್ಡಿಮರ್, ನೊಬೆಲ್ ಪ್ರಶಸ್ತಿ ಪ್ರದಾನ ಸಂದರ್ಭದ ಭಾಷಣದಲ್ಲಿ ಆಡಿದ ಮಾತುಗಳಿವು.
- ಹರೀಶ್ ಕೇರ