ಕಳೆದ ಮೂವತ್ತು, ಮೂವತ್ತೈದು ವರುಷಗಳಿಂದಲೂ ಎರಡೂ ಕಣ್ಣುಗಳಿರದಿದ್ದರೂ ಅವರ ಲವಲವಿಕೆಯ ಬದುಕಿಗೆ ಅಚ್ಚುಕಟ್ಟಾದ ಜೀವನ ಕ್ರಮಕ್ಕೆ ಎಂದಿಗೂ ಚ್ಯುತಿ ತಂದುಕೊಂಡವರಲ್ಲ. 'ನಮಸ್ಕಾರ ಸರ್' ಎಂಬಷ್ಟರಿಂದಲೇ ಅಂಥವರ ಹೆಸರು ಹೇಳಿ ಮಾತನಾಡಿಸುವ ಅವರ ಪರಿ ತುಂಬಾ ಅಚ್ಚರಿ ಎನಿಸುತ್ತಿತ್ತು. ಬೆಳಗಿನ ಹತ್ತು ಗಂಟೆ ಸುಮಾರಿಗೆ ಶುಭ್ರ ಮತ್ತು ಚೊಕ್ಕ ಪೋಷಾಕಿನಲ್ಲಿ ತಮ್ಮ ಕಾಯಂ ಕುರ್ಚಿ ಮೇಲೆ ಆಸೀನರಾಗಿರುತ್ತಿದ್ದರು. ಧ್ವನಿ ಗುರುತಿಸಿ ಪ್ರೀತಿಯಿಂದ ಬರಮಾಡಿಕೊಂಡು ಮಾತನಾಡಿಸುತ್ತಾ, ನಡುನಡುವೆ ಬರುವ ಫೋನು ಕರೆಗಳಿಗೆ 'ಡಾಕ್ಟರ್ ಮಧ್ಯಾಹ್ನ ಒಂದು ಗಂಟೆಗೆ ಮನ್ಯಾಗ ನೋಡ್ತಾರ. ಸಾಯಂಕಾಲ ಆರರ ಮ್ಯಾಲೆ ದವಾಖಾನಿಗ ಹೋಗ್ತಾರ. ನಿಮಗ ಹೆಂಗ್ ಅನುಕೂಲವೋ ಹಂಗ ಮಾಡ್ರೀ' ಎಂದು ಸೂಚನೆ ಕೊಟ್ಟು ಮತ್ತೆ ಮಾತು ಮುಂದುವರಿಸುತ್ತಿದ್ದರು. ನಮ್ಮ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆಯ ಅತ್ಯಂತ ದೊಡ್ಡ ಆದಾರ ಸ್ತಂಭದಂತಿದ್ದ ಪ್ರೊ. ಶ್ರೀನಿವಾಸ ತೋಫಖಾನೆಯವರು ಪ್ರತಿ ಕಾರ್ಯಕ್ರಮದ ನಂತರ ಅತ್ಯುತ್ತಮ ಫೀಡ್‌ಬ್ಯಾಕ್ ಕೊಡುತ್ತಿದ್ದರು. ಎಲ್ಲ ಕಾರ್ಯಕ್ರಮಕ್ಕೂ ತಪ್ಪದೇ ಬರುತ್ತಿದ್ದ ಅವರಿಗೆ ಮುಂದಿನ ಸಾಲಿನ ಎದುರಿನ ಕುರ್ಚಿಯೇ ಕಾಯಂ. 15 ನಿಮಿಷ ಮೊದಲೇ ಆಗಮಿಸುತ್ತಿದ್ದ ಅವರಿಗೆ ಎಲ್ಲರೂ ನಮಸ್ಕಾರ ಹೇಳುತ್ತಿದ್ದರೆ ಅವರ ಹೆಸರು ಹಿಡಿದು 'ಹೆಂಗಿದ್ದೀರಿ?' ಎಂದು ಕೇಳುತ್ತಿದ್ದರು.
ನಮ್ಮ ವೇದಿಕೆಗೆ ಬರೆದುಕೊಟ್ಟಿದ್ದ 17 ಸಾವಿರ ರುಪಾಯಿಗಳ ಚೆಕ್ಕೇ ಅವರು ಕೊನೆಯದಾಗಿ ಸಂದಾಯ ಮಾಡಿದ್ದೆಂದು ಕಾಣುತ್ತದೆ. ಈಗೇನಿದ್ದರೂ ನಮ್ಮ ಕಾರ್ಯಕ್ರಮದಲ್ಲಿ ಆ ಮುಂದಿನ ಅವರ ಕುರ್ಚಿ ಖಾಲಿ. ಆ ಖಾಲಿ ಕುರ್ಚಿಯ ತುಂಬೆಲ್ಲ ಅವರ ನೆನಪು. ಅವರಲ್ಲಿ ಸ್ಫೂರ್ತಿ, ಹಾಸ್ಯ, ಲವಲವಿಕೆ, ಅಧ್ಯಯನ, ಚರ್ಚೆ, ವಿದ್ವತ್ತುಗಳನ್ನೆಲ್ಲ ಅಧ್ಯಾತ್ಮದ ಚೀಲದಲ್ಲಿ ಕಟ್ಟಿಕೊಟ್ಟಂಥ ಅವರದೊಂದು ನೆನಪು ಮಾತ್ರ. ಕನ್ನಡಕ್ಕೆ ಎಂಟು ಜ್ಞಾನಪೀಠ, ಒಂದು ಸರಸ್ವತಿ ಸಮ್ಮಾನ್ ಅಷ್ಟೇ ಏಕೆ, ಇನ್ನೂ ಹತ್ತಾರು ಇಂಥವರನ್ನು ತರುವವರು ಬಂದಾರು. ಆದರೆ, ಮುಂದೆಂದೂ ಈ ನೆಲದಲ್ಲಿ ಮತ್ತೊಬ್ಬ ಶ್ರೀನಿವಾಸ ತೋಫಖಾನೆ ಹುಟ್ಟಲಾರನಲ್ಲ ಎಂಬುದೇ ಅತ್ಯಂತ ನೋವಿನ ಸಂಗತಿ.
- ಎಂ.ಎ. ಸುಬ್ರಹ್ಮಣ್ಯ, ಸಾಹಿತ್ಯ ಪ್ರಕಾಶನ (ಮುನ್ನುಡಿಯಿಂದ)
ಜನಪ್ರಿಯ ಅಂಕಣಕಾರ, ಲೇಖಕ ಹಾಗೂ ಈಗ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ಸಿಂಹ ಅವರು ಕನ್ನಡಪ್ರಭದ ತಮ್ಮ ಅಂಕಣದಲ್ಲಿ 24-9-11 ರಂದು ಅಂದರೆ, ಶ್ರೀ ತೋಫಖಾನೆ ಅವರಿಗೆ 85 ತುಂಬಿದ ಸಂದರ್ಭದಲ್ಲಿ ಬರೆದ ಲೇಖನದ ಆಯ್ದ ಭಾಗ.
ಸಾಮಾನ್ಯವಾಗಿ ಹೀಗೆ ಕಣ್ಣು, ಕೈ ಕಾಲು ಕಳೆದುಕೊಂಡವರು ಅದನ್ನು ಕಹಿಯಾಗಿ ತೆಗೆದುಕೊಳ್ಳುತ್ತಾರೆ. ನನಗೆ ಯಾರೂ ಕನಿಕರಿಸಲಿಲ್ಲ ಎಂಬ ದೈನ್ಯ, ಇಲ್ಲಾ ಜಗತ್ತಿನ ಬಗ್ಗೆ ವೈರ ಇಟ್ಟುಕೊಳ್ಳುತ್ತಾರೆ. ಇವೆರಡೂ ಇಲ್ಲದಿರುವುದು ಅವರ ವಿಶೇಷ. ಬದುಕೇ ಮುಗಿಯಿತು ಎಂದುಕೊಳ್ಳುವವರು ತೋಫಖಾನೆ ಯವರನ್ನು ನೋಡಿ ಬದುಕುವುದನ್ನು ಕಲಿಯಬೇಕು.
26-09-2010.
ಸವಾಯಿ ಗಂಧರ್ವ ಸಭಾಗೃಹ,
ದೇಶಪಾಂಡೆನಗರ, ಹುಬ್ಬಳ್ಳಿ.
ಇಷ್ಟು ತಡವಾಗಿಯಾದರೂ ನೀವು ಶ್ರೀನಿವಾಸ ತೋಫಖಾನೆಯವರನ್ನು ಅಭಿನಂದಿಸಿ ಶಾಪಮುಕ್ತರಾದಿರಿ. ಇವರನ್ನು ಅಭಿನಂದಿಸುವುದನ್ನೇ ನಾದರೂ ಮರೆತಿದ್ದರೆ ಮುಂದಿನ ತಲೆಮಾರು ನಿಮಗೆ ಶಾಪಹಾಕುತ್ತಿತ್ತು. ಒಂದು ಊರು ಬೆಳೆಯುವುದು ಅಗಲವಾದ ರಸ್ತೆಗಳಿಂದಲ್ಲ, ದೊಡ್ಡ ದೊಡ್ಡ ಕಟ್ಟಡಗಳಿಂದಲೂ ಅಲ್ಲ. ತೋಫಖಾನೆಯಂಥವರಿದ್ದರೆ ಊರು ಬೆಳೆಯುತ್ತದೆ, ಪ್ರಸಿದ್ಧವಾಗುತ್ತದೆ. ಗದಗಕ್ಕೆ ಹೆಸರು ಬಂದಿದ್ದು ಕುಮಾರವ್ಯಾಸನ ನಾಡೆಂಬ ಕಾರಣಕ್ಕೆ, ಷರೀಫರಿಂದಾಗಿ ಹಾವೇರಿಯ ಶಿಶುವಿನಹಾಳ ಪ್ರಸಿದ್ಧವಾಯಿತು. ಹಾಗೆ ತೋಫಖಾನೆಯವರಂಥವರು ಜನ್ಮತಳೆದ ಕಾರಣ ನಮ್ಮ ನಾಡಿಗೆ ಹೆಸರು ಬಂದಿದೆ.
ಅಂದು ಗದುಗಿನ ತೋಂಟದಾರ್ಯ ಮಹಾಸ್ವಾಮೀಜಿಯವರು ಹೀಗೆ ಹೇಳುತ್ತಿದ್ದರೆ ನೆರೆದ ಮಹಾಜನತೆ ನಿಬ್ಬೆರಗಾಗಿ ಆಲಿಸುತ್ತಿತ್ತು!
ನಿಮಗೆ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಗಳ ಬಗ್ಗೆ ಹೇಳಬೇಕೆಂದರೆ ಬಹುಶಃ ಅವರಷ್ಟು ಪುಸ್ತಕಗಳನ್ನು ಓದಿರುವ, ಸಮಕಾಲೀನ ಆಗುಹೋಗುಗಳ ಬಗ್ಗೆ ಅರಿವಿರುವ ಮತ್ತೊಬ್ಬ ಸ್ವಾಮೀಜಿಯನ್ನು ಹುಡುಕಲು ತ್ರಾಸವಾದೀತು. ಅವರೊಬ್ಬ ನಿಷ್ಠುರವಾದಿ, ಔಣಣ ಖಠಿಠಞಜಟಿ, ಬೀದರಿನಲ್ಲಿ ನಿಂತು ಹೈದರಾಬಾದ್ ಸುಲ್ತಾನರು ನಡೆಸಿದ ದೌರ್ಜನ್ಯದ ಬಗ್ಗೆ ಖಡಕ್ ಆಗಿ ಮಾತನಾಡುವ ಎದೆಗಾರಿಕೆಯನ್ನು ಅವರಲ್ಲಿ ಮಾತ್ರ ಕಾಣಲು ಸಾಧ್ಯ. ಅಂತಹ ತೋಂಟದಾರ್ಯ ಸ್ವಾಮೀಜಿಗಳು, ನನ್ನ ಜೀವನದ ಪರಮಭಾಗ್ಯವೆಂದರೆ ಶ್ರೀನಿವಾಸ ತೋಫಖಾನೆಯವರಂಥವರು ಗುರುಗಳಾಗಿ ಸಿಕ್ಕಿದ್ದು ಎಂದರು ಆ ದಿನ. ಅದನ್ನು ಆಗಾಗ್ಗೆ ಪುನರುಚ್ಚರಿಸುತ್ತಿರುತ್ತಾರೆ. ಹೌದು, ಶ್ರೀನಿವಾಸ ತೋಫಖಾನೆಯವರ ಬದುಕಿನ ಏರು-ಪೇರುಗಳು ಹಾಗೂ ಅವುಗಳಿಗೆ ಅವರು ಸ್ಪಂದಿಸಿದ ಬಗೆಯನ್ನು ನೋಡಿದಾಗ ಎಂತಹ ಅಸಾಧಾರಣ ವ್ಯಕ್ತಿತ್ವ ಅವರದ್ದು ಎನಿಸುತ್ತದೆ.
---
ಸಿದ್ದೀ ಇಲ್ಲದ್ ಸಾದ್‌ನೇ!
ದೇವ್ರಂತ್ ಒಬ್ಬ ಇದ್ದಾನ್ ಅಂತೇ;
ಎಲ್‌ದಕ್ ಅವ್‌ನೇ ಕಾರ್‌ಣಾ!
ಹತ್ತೆಂಟ್ ಗೊಂಬೀ ಹೆಸ್‌ರಿನ್ ಚಿಂತೇ
ಸಿದ್ದಿಗ್ ಅಂತೇ ಸಾದ್‌ನಾ!
ಸಾದ್‌ನದ್ ಕೆಲ್ಸಾ ಸಿದ್ದೀ ಪಡೆಯೋದ್;
ಆ ಮ್ಯಾಗ್ ಅದರ್‌ದೇನ್ ಹಂಗೂ?
ಸಿದ್ದೀ ಆದ್ರೂ ಸಾದ್‌ನೇ ನಡ್‌ಸೋದ್
ಬುದ್ದೀಗ್ ಹತ್ತಿದ್ ಜಂಗೂ!
ಕಂಚಿನ್ ದೇವ್ರೂ ಮಣ್ಣಿನ್ ಮೂರ್ತೀ
ಜನ್‌ವಾರ್ ಜಪ್‌ಮಣಿ ಲಿಂಗಾ-
ಎಸ್ಟೊಂದ್ ಮಾಡಿಲ್ ಲಿಸ್ಟೀಗ್ ಬರ್ತೀ?
ಸಿದ್ದೀಗ್ ಬೇಕ್ ಅಂತ್ ಸಂಗಾ!
ದೇವರ್ ದರ್ಶ್‌ನಾ ಆದ್‌ಮೇಲ್ ಹೆಸ್ರಿನ್
ಗರ್ಜ್ ಏನ್ ಐತೇ ಸುಮ್‌ಕೇ?
ಪೂಜೀ ಗೀಜೀ ನೂರಾರ್ ಸೋಗಿನ್
ಹಂಗ್ ಯಾಕ್ ಬೇಕೋ ಮಂಕೇ?
ಗೋರೀ ಸೇರೋ ವರೆವಿಗ್ ಸಾದ್‌ನೇ
ಮಾಡ್‌ಕೋಂತ್ ಹೋದ್ರೇ, ಸಿದ್ದೀ
ಸತ್ತ್ ಮೇಲ್ ಅಲ್‌ವೇ ಸಿಕ್ಕೋದೇನೇಯ
ಐತೋ ನಿನ್‌ಗೇನ್ ಬುದ್ದೀ?
ಸಾಯೋ ವರೆಗೂ ಸಿಕ್‌ದೇ ಹೋದ್ರೇ
ಮಾಡ್‌ತೀ ಯಾಕೋ ಬೋದ್‌ನೇ?
ಸಿಟ್ ಆಗ್‌ಬೇಡಾ, ಸುಟ್ ಹಾಕ್ ಅಂದ್ರೇ
ಸಿದ್ದೀ ಇಲ್ಲದ್ ಸಾದ್‌ನೇ!
- ಪ್ರೊ. ಶ್ರೀನಿವಾಸ ತೋಫಖಾನೆ