ಬಿಜೆಪಿಯ ಮತ್ತೆರಡು ವಿಕೆಟ್ ಪತನ: ಮಾಡಾಳ್, ರಾಮಚಂದ್ರ ರಾಜಿನಾಮೆ
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ ಒಂದೊಂದೆ ವಿಕೆಟ್ ಪತನವಾಗುತ್ತಿದ್ದು, ಚನ್ನಗಿರಿ ಬಿಜೆಪಿ ..
ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ ಒಂದೊಂದೆ ವಿಕೆಟ್ ಪತನವಾಗುತ್ತಿದ್ದು, ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಜಗಳೂರು ಬಿಜೆಪಿ ಶಾಸಕ ರಾಮಚಂದ್ರ ಅವರು ಗುರುವಾರ ತಮ್ಮ ಶಾಸಕ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ.
ನಿನ್ನೆಯಷ್ಟೇ ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ರಾಜಿನಾಮೆಯ ನೀಡಿದ್ದರು. ಇದೀಗ ಮತ್ತೆ ಇಬ್ಬರು ಬಿಜೆಪಿ ಶಾಸಕರು ರಾಜಿನಾಮೆ ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದೆ.
ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ರಾಮಚಂದ್ರ ಅವರು ಇಂದು ಸ್ಪೀಕರ್ ಕೆ.ಜೆ.ಬೋಪಯ್ಯ ಅವರನ್ನು ಭೇಟಿ ಮಾಡಿ ಇಬ್ಬರು ಸಹ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೆಜೆಪಿ ಸೇರುತ್ತಿರುವ ಹಿನ್ನೆಲೆಯಲ್ಲಿ ವಿರೂಪಾಕ್ಷಪ್ಪ ಹಾಗೂ ರಾಮಚಂದ್ರ ಅವರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಇನ್ನು ಬಿಜೆಪಿ ತೊರೆಯಲು ನಿರ್ಧರಿಸಿರುವ ಸುರುಪುರ ಶಾಸಕ, ಮಾಜಿ ಸಚಿವ ರಾಜುಗೌಡ ಅವರು ಇಂದು ಸಂಜೆಯೊಳಗೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಸಾಧ್ಯತೆ ಇದೆ.