ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೀದರ್ ಚೌಳಿಮಠದ 3 ಕಿರಿಯ ಸ್ವಾಮೀಜಿಗಳು ಅಗ್ನಿಗಾಹುತಿ

ಚೌಳಿಮಠದ ಮೂವರು ಕಿರಿಯ ಸ್ವಾಮೀಜಿಗಳು ಅಗ್ನಿಪ್ರವೇಶ ಮಾಡಿ ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಸೋಮವಾರ ನಡೆದಿದೆ.

Lingaraj Badiger
Updated On : 8 Apr 2013, 7:09 am

ಬೀದರ್: ಬೀದರ್‌ನ ಹೊರವಲಯದಲ್ಲಿರುವ ಚೌಳಿಮಠದ ಮೂವರು ಕಿರಿಯ ಸ್ವಾಮೀಜಿಗಳು ಅಗ್ನಿಪ್ರವೇಶ ಮಾಡಿ ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಸೋಮವಾರ ನಡೆದಿದೆ.

ತಮ್ಮ ಗುರುಗಳಾದ ಗಣೇಶ ಅವಧೂತ ಶ್ರೀಗಳು ಜೀವಂತ ಸಮಾಧಿಯಾದ ಹಿನ್ನೆಲೆಯಲ್ಲಿ ತೀವ್ರ ಮನನೊಂದು ಈ ಮೂವರು ಶ್ರೀಗಳು ಇಂದು ಬೆಳಗ್ಗೆ 5 ಗಂಟೆಯ ಸುಮಾರಿಗೆ ಕಟ್ಟಿಗೆ ರಾಶಿಗೆ ಬೆಂಕಿ ಹಚ್ಚಿಕೊಂಡು ಅಗ್ನಿ ಪ್ರವೇಶ ಮಾಡಿದ್ದಾರೆ.

ಕಿರಿಯ ಸ್ವಾಮೀಜಿಗಳಾದ ಜಗನ್ನಾಥಸ್ವಾಮೀಜಿ(22), ಪ್ರಣವ್‌ಸ್ವಾಮೀಜಿ(16) ಹಾಗೂ ಈರಾರೆಡ್ಡಿ(50) ಸ್ವಾಮೀಜಿಗಳು ಅಗ್ನಿ ಪ್ರವೇಶ ಮಾಡಿ ಜೀವಂತ ದಹನವಾಗಿದ್ದಾರೆ. ಅಲ್ಲದೆ ತಾವು 'ಸ್ವ ಇಚ್ಚೆಯಿಂದ ಅಗ್ರಿಪ್ರವೇಶ ಮಾಡುತ್ತಿದ್ದೇವೆ. ನಮಗೆ ಯಾರೂ ವೈರಿಗಳಿಲ್ಲ. ಗಣೇಶ ಸ್ವಾಮೀಜಿಗಳ ಸೇವೆ ನಮ್ಮ ಗುರಿ. ಅವರಿಲ್ಲದ ಮೇಲೆ ನಾವು ಯಾರ ಸೇವೆ ಮಾಡಬೇಕು' ಎಂದು ಡೆತ್‌ನೋಟ್ ಬರೆದಿದ್ದಾರೆ.

ಇನ್ನು ಅಗ್ನಿ ಪ್ರವೇಶ ಮಾಡಿದ ಮೂವರು ಕಿರಿಯ ಶ್ರೀಗಳ ಮಾಹಿತಿ ಲಭ್ಯವಾಗಿದ್ದು, 16 ವರ್ಷದ ಪ್ರಣವ್ ಸ್ವಾಮೀಜಿ ಬೀದರ್ ತಾಲೂಕಿನ ಚೌಳಿ ಗ್ರಾಮದ ನಿವಾಸಿಯಾಗಿದ್ದು, 8ನೇ ತರಗತಿಯಲ್ಲಿ ಓದುತ್ತಿದ್ದರು. ಈರಾರೆಡ್ಡಿ ಸ್ವಾಮೀಜಿ ಬೀದರ್ ತಾಲೂಕಿನ ಮಣ್ಣೂರು ಗ್ರಾಮದ ನಿವಾಸಿಯಾಗಿದ್ದು, ಅವರಿಗೆ 50 ವರ್ಷವಾಗಿತ್ತು. ಇನ್ನು 22 ವರ್ಷದ ಜಗನ್ನಾಥ ಸ್ವಾಮೀಜಿ ಬೀದರ್ ತಾಲೂಕಿನ ನಾಗೂರು ಗ್ರಾಮದ ನಿವಾಸಿಯಾಗಿದ್ದರು ಎನ್ನಲಾಗಿದೆ.

ಫೆ.28ರಂದು ಗಣೇಶ್ರೀಗಳು ಜೀವಂತ ಸಮಾಧಿಯಾಗಿದ್ದರು. ಶ್ರೀಮಠದಲ್ಲಿ ಮೇಲಿಂದ ಮೇಲೆ ಅನಾಹುತಗಳು ಸಂಭವಿಸುತ್ತಿದ್ದು, ಧಾರ್ಮಿಕ ಶ್ರದ್ಧಾಕೇಂದ್ರದಲ್ಲಿ ಏನ್ ನಡಿಯುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಇದೇ ವೇಳೆ ಪೊಲೀಸರ ನಿರ್ಲಕ್ಷ್ಯದ ಆರೋಪ ಸಹ ಕೇಳಿ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಚೌಳಿ ಮಠದ ಆವರಣದಲ್ಲೇ ಮೂವರು ಶ್ರೀಗಳ ಅಂತ್ಯಕ್ರಿಯೆ
ಬೀದರ್‌ನ ಹೊರವಲಯದಲ್ಲಿರುವ ಚೌಳಿಮಠದ ಆವರಣದಲ್ಲೇ ಅಗ್ನಿ ಪ್ರವೇಶ ಮಾಡಿ ಸಜೀವ ದಹನವಾದ ಮೂವರು ಕಿರಿಯ ಶ್ರೀಗಳ ಅಂತ್ಯಕ್ರಿಯೆ ಮಾಡಲಾಗಿದೆ.

ಅವರ ಗುರುಗಳಾದ ಗಣೇಶ್ವರ ಅವಧೂದ ಶ್ರೀಗಳ ಸಮಾಧಿ ಪಕ್ಕದಲ್ಲೇ ಕಿರಿಯ ಶ್ರೀಗಳಾದ ಜಗನ್ನಾಥಸ್ವಾಮೀಜಿ(22), ಪ್ರಣವ್‌ಸ್ವಾಮೀಜಿ(16) ಹಾಗೂ ವೀರಾರೆಡ್ಡಿ(50) ಶ್ರೀಗಳ ಅಂತ್ಯಸಂಸ್ಕಾರ ನಡೆಸಲಾಗಿದೆ.

ಅವಧೂತರ ಸಂಪ್ರದಾಯದಂತೆ ಸುಗಂಧ ದ್ರವ್ಯ ಹಾಗೂ ವಿಭೂತಿ ಬಳಸಿ ಈ ಮೂವರು ಕಿರಿಯ ಸ್ವಾಮೀಜಿಗಳ ಅಂತ್ಯಕ್ರಿಯೆ ನಡೆಸಲಾಯಿತು.

ಸ್ವಾಮಿಗಳ ಡೆತ್‌ನೋಟ್ ವಿವರ
ಪರಮ ಪೂಜ್ಯ ಗುರುದೇವರೇ ನಮ್ಮ ತಂದೆ, ತಾಯಿ, ಬಂಧು ಬಳಗ, ಬ್ರಹ್ಮ, ವಿಷ್ಣು, ರುದ್ರ ದೇವಾದಿ ದೇವತೆ...
ಅವರೇ(ಗಣೇಶ ಅವಧೂತ ಶ್ರೀಗಳು) ನಮ್ಮ ಪಾಲಿನ ಸರ್ವಸ್ವವಾಗಿದ್ದರು. ಮೊದಲೇ ನಾವೆಲ್ಲರೂ ನಿಮ್ಮನ್ನಗಲಿ ಇರಲಾರೆವು ಎಂದಾಗ ಈ ಅಶಾಶ್ವತ ಜಗತ್ತಿನಲ್ಲಿ ಈ ಕಲಿಯ ಪ್ರಭಾವಿತ ಜನರ ನಡುವೆ ಇರುವುದಿಲ್ಲ ಎಂದಾಗ ನನ್ನ ಧಾಮಕ್ಕೆ ಬನ್ನಿರಿ ಎಂದು ಹೇಳಿದರು. ಬರುವುದು ಹೇಗೆಂದು ಕೇಳಿದಾಗ ಒಬ್ಬರಿಂದ ಕಟ್ಟಿಗೆ ತರಿಸಿ ಅಗ್ನಿದೇವನ ಮುಖಾಂತರ ಬನ್ನಿರಿ ಎಂದು ಹೇಳಿದರು. ಗುರುದೇವರ ಅಗಲಿಕೆಯ ವಿರಹದ ಬಾಧೆಯನ್ನು ತಾಳುತ್ತಾ ಬಾಳುತ್ತಾ ಹಾಗೇ ಬದುಕಿದೆವು. ಆದರೂ ಗುರು-ಶಿಷ್ಯರ ಚರಿತ್ರೆಯನ್ನು ನೋಡಿ, ಕೇಳಿ ಗುರುದೇವರನ್ನು ಕಳೆದುಕೊಂಡೆನಲ್ಲಾ ಎಂಬ ವಿರಹವನ್ನು ಸಹಿಸಲಾಗದೇ ಅವರ ಪಾದದಲ್ಲಿ ಒಂದಾಗಿದ್ದೇವೆ.

ಗುರುದೇವರ ಮುಂದೆ ನಾವುಗಳು ನೀವು ದೇಹವನ್ನು ತ್ಯಜಿಸಿದ ನಂತರ ನಾವುಗಳು ಕೂಡ ದೇಹವನ್ನು ತ್ಯಜಿಸುತ್ತೇವೆಂದು ಪ್ರತಿಜ್ಞೆ ಮಾಡಿದೇವು. ಅದಕ್ಕಾಗಿಯೇ ಕಟ್ಟಿಗೆಯ ಪ್ರಬಂಧವನ್ನು(ಕಟ್ಟಿಗೆ ರಾಶಿ) ಮಾಡಿಸಿದ್ದರು. ನಮ್ಮ ಪ್ರತಿಜ್ಞೆ ಪೂರ್ಣ ಮಾಡಿದ್ದೇವೆ. ಆ ಸದ್ಗುರ ದೇವರು ನಿರಾಕಾರ ರೂಪದಿಂದ ಇಲ್ಲೇ ಇದ್ದು, ಎಲ್ಲ ಜೀವ ಕೋಟಿಗಳಿಗೂ ನಾನೇ ನನ್ನದೆಂಬ ಅಹಂಕಾರವನ್ನು ಬಿಡಿಸಿ ನಿಜ ಜ್ಞಾನವಿತ್ತು. ತನ್ನಲ್ಲಿ ಒಂದಾಗಿಸಿಕೊಳ್ಳಲಿ. ನಾವುಗಳು ನಮ್ಮ ಸ್ವ-ಇಚ್ಚೆಯಿಂದಲೇ ನಮ್ಮ ಸ್ವಧಾಮವಾದ ಕೈಲಾಸಕ್ಕೆ ಹೋಗಿದ್ದೇವೆ.

ನಮಗೆ ಯಾರೂ ತಂದೆ-ತಾಯಿ, ಬಂಧು-ಬಳಗ ಇಲ್ಲ. ಶತ್ರು-ಮಿತ್ರರೂ ಇಲ್ಲ. ಆ ದೇವರೇ ನಮಗೆ ಎಲ್ಲವೂ. ಅದಕ್ಕಾಗಿ ನಮ್ಮ ವಿಷಯದಲ್ಲಿ ಯಾರಗೂ ಯಾವ ತೊಂದರೆಯನ್ನೂ ಕೊಡಬೇಡಿ. ಗುರು ದೇವರ ಸೇವೆಗಾಗಿಯೇ ಕೈಲಾಸದಿಂದ ಬಂದವ ನಾನು. ಗುರು ದೇವರ ಕೈಲಾಸಕ್ಕೆ ಹೋದಾಗ ನನ್ನ ಕೆಲಸವೂ ಏನೂ ಇಲ್ಲ. ಇಲ್ಲಿ ಬದುಕಿದರೆ ದೇವರ ದಿವ್ಯ ರೂಪ ನೋಡಿಯೇ ಬದುಕುವೆ. ಇಲ್ಲಿ ದೇಹ ಬಿಟ್ಟು ಗುರುದೇವರರಿರುವ ನಮ್ಮ ಕೈಲಾಸಕ್ಕೆ ಹೋಗುವೆ.

ಇಷ್ಟು ದಿನಗಳವರೆಗೆ ಮಂದಿರ ಮುಂದುವರೆಯುವುದನ್ನು ನೋಡುವುದಕ್ಕೆ ಉಳಿದೆ. ಈಗ ನನ್ನ ಕೆಲಸವೂ ಪೂರ್ಣವಾಯ್ತು. ನೀವು ಕಂಡ ದೇಹವು ನಾನಲ್ಲ. ದೇಹವನ್ನು ಇಲ್ಲೇ ಬಿಟ್ಟು ನಾನು ನನ್ನ ಗುರುದೇವರ ಧಾಮಕ್ಕೆ ಹೋಗಿದ್ದೇನೆ. ನಿಮ್ಮೆಲ್ಲರ ನಿಜ ಧಾಮವೂ ಅದೇ ಆಗಿದೆ. ಈ ದೇಹದ ಭ್ರಮೆಯನ್ನು ಬಿಡಿ. ನಾನು ನನ್ನದು, ನನ್ನಿಂದಲೇ ಎಂಬ ಅಹಂಕಾರ ಮಮಕಾರವನ್ನು ತ್ಯಜಿಸಿ ಸದ್ಗುರು ಗಣೇಶ್ವರ ಲಿಂಗನ ಆಶ್ರಮದಲ್ಲಿ ಕಾಲವನ್ನು ಕಳೆಯಿರಿ. ಈ ನಾಮ, ರೂಪ, ಅಧಿಕಾರ, ಅಂತಸ್ತು ಶಾಶ್ವತವಲ್ಲ. ನಿನ್ನೆ ಇರಲಿಲ್ಲ. ನಾಳೆಯೂ ಇರುವುದಿಲ್ಲ. ಗೋಡೆಗಳು ಹೊಗೆಯಿಂದ ಕಪ್ಪಾಗಿರಬಹುದು. ಸುಣ್ಣ ಮಾಡಿಯಾದ್ರೂ ಗೋಡೆಯನ್ನು ಬೆಳ್ಳಗೆ ಮಾಡಬಹುದು. ಆದರೆ ಅಂತಃಕರಣ ಶುದ್ಧಿ ಗುರುಸೇವೆಯಿಂದ ಮಾತ್ರ ಸಾಧ್ಯ..

ಸರ್ವೇಜನ ಸುಖಿನೋ ಭವಃ
ಇತಿ
ಪ್ರಣವ್ ಸ್ವಾಮಿ ಮತ್ತು ಜಗನ್ನಾಥ ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement