ವಿಧಾನಸಭೆಯಿಂದ ಸ್ಟಾಲಿನ್ ಸೇರಿ 4 ಡಿಎಂಕೆ ಶಾಸಕರ ಅಮಾನತು
ಚೆನ್ನೈ: ವಿರೋಧಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ ಸೇರಿದಂತೆ ನಾಲ್ವರು ಡಿಎಂಕೆ ಶಾಸಕರನ್ನು 2 ದಿನಗಳ ಕಾಲ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಮಿಳುನಾಡು ವಿಧಾನಸಭೆ ಸ್ಪೀಕರ್ ಪಿ. ಧನಪಾಲ್ ಹೇಳಿದ್ದಾರೆ.
ಕಲಾಪದ ಸಮಯದಲ್ಲಿ ಶಾಸಕರ ಅನುಚಿತ ವರ್ತನೆಯನ್ನು ಖಂಡಿಸಿದ ಸ್ಪೀಕರ್ ಪಿ. ಧನಪಾಲ್ ಅವರು, ಡಿಎಂಕೆ ಶಾಸಕರಾದ ಗೋವಿ, ತಂಗಮ್ ತೆನ್ನಾರಸು ಹಾಗು ಮೋಯ್ದಿನ್ ಖಾನ್‌ರನ್ನು ಸದನದಿಂದ ಅಮಾನತುಗೊಳಿಸಿದ್ದಾರೆ. ಅಲ್ಲದೆ ಸ್ಪೀಕರ್ ಆದೇಶದ ಮೇರೆಗೆ ಡಿಎಂಕೆಯ ನಾಲ್ವರು ಶಾಸಕರನ್ನು ಬಲವಂತವಾಗಿ ಮಾರ್ಷಲ್‌ಗಳು ಕಲಾಪದಿಂದ ಹೊರಗೆ ಕಳುಹಿಸಿದ ಘಟನೆಗೆ ತಮಿಳುನಾಡು ವಿಧಾನಸಭೆ ಸಾಕ್ಷಿಯಾಯಿತು.
ಕಲಾಪದಲ್ಲಿ ಮುಲ್ಲಪೆರಿಯಾರ್ ಹಾಗು ಕಾವೇರಿ ನದಿ ನೀರಿನ ಹಂಚಿಕೆ ಕುರಿತಾದ ಚರ್ಚೆಗಳು ಮುಗಿದ ನಂತರ, ಡಿಎಂಕೆ ಪಕ್ಷದ ಶಾಸಕರು ಕೆಲವೊಂದು ಅಂಶಗಳನ್ನು ಪ್ರಸ್ತಾಪಿಸಲು ಮುಂದಾದರು. ಇದಕ್ಕೆ ತಾವು ಆಸ್ಪದ ನೀಡಲಿಲ್ಲ. ಸದನದಲ್ಲಿ ಗದ್ದಲವೆಬ್ಬಿಸಿ, ಸದನದ ಬಾವಿಗೆ ನುಗ್ಗಲು ಯತ್ನಿಸಿದ ಶಾಸಕರನ್ನು ಬಲವಂತವಾಗಿ ಹೊರಗೆ ಕಳುಹಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ.