ಪುತ್ತೂರು ಬಳಿ ಅನಿಲ ಟ್ಯಾಂಕರ್ ಪಲ್ಟಿ: 7 ಮಂದಿ ಸಜೀವ ದಹನ
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಪರ್ನೆ ಬಳಿ ಅನಿಲ ಟ್ಯಾಂಕರ್‌ವೊಂದು ಪಲ್ಟಿಯಾದ ಪರಿಣಾಮ...
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಪರ್ನೆ ಬಳಿ ಅನಿಲ ಟ್ಯಾಂಕರ್‌ವೊಂದು ಪಲ್ಟಿಯಾದ ಪರಿಣಾಮ ಏಳು ಮಂದಿ ಸಜೀವ ದಹನವಾದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ, ಅನಿಲ ಸ್ಫೋಟಗೊಂಡಿದೆ. ದುರಂತದಲ್ಲಿ ಅನಿಲ ಟ್ಯಾಂಕರ್‌ನ ಚಾಲಕ, ಕ್ಲೀನರ್, ರಸ್ತೆ ಪಕ್ಕದ ಓರ್ವ ಮಹಿಳೆ ಹಾಗೂ 11 ವರ್ಷದ ಮಗು ಸೇರಿದಂತೆ ಏಳು ಜನ ಸಜೀವ ದಹನವಾಗಿದ್ದಾರೆ.
ಮಂಗಳೂರಿನ ಎಂಆರ್‌ಪಿಎಲ್‌ನಿಂದ ಬೆಂಗಳೂರಿಗೆ ಹೊರಟಿದ್ದ 16,000 ಲೀಟರ್ ಅನಿಲ ತುಂಬಿದ್ದ ಟ್ಯಾಂಕರ್, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನಂತರ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ರಸ್ತೆ ಪಕ್ಕದಲ್ಲಿದ್ದ 8 ಮನೆಗಳಿಗೂ ತಗುಲಿದೆ. ಘಟನೆಯಲ್ಲಿ ಒಂದು ಓಮ್ನಿ ಕಾರು ಸಂಪೂರ್ಣ ಭಸ್ಮವಾಗಿದೆ.
ಘಟನೆಯಲ್ಲಿ ಹಲವು ಜನ ಗಾಯಗೊಂಡಿದ್ದು, ಗಾಯಗೊಂಡವರನ್ನು ಪುತ್ತೂರಿನ ಸರ್ಕಾರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ದೌಡಾಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಇನ್ನು ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.