ಪಟ್ಟಿ ಪರಿಷ್ಕರಿಸಿ, ಇಲ್ಲ ಬಂಡಾಯ ಎದುರಿಸಿ:ಅನಿಲ್ ಲಾಡ್
ಬಳ್ಳಾರಿ ಅಭ್ಯರ್ಥಿಗಳ ಪಟ್ಟಿಯನ್ನು ಪರಿಷ್ಕರಿಸಿ, ತಮ್ಮ ಬೆಂಬಲಿಗ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ, ಇಲ್ಲವೇ ಬಂಡಾಯ ಎದುರಿಸಿ ಎಂದು ..
ನವದೆಹಲಿ: ಬಳ್ಳಾರಿ ಅಭ್ಯರ್ಥಿಗಳ ಪಟ್ಟಿಯನ್ನು ಪರಿಷ್ಕರಿಸಿ, ತಮ್ಮ ಬೆಂಬಲಿಗ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ, ಇಲ್ಲವೇ ಬಂಡಾಯ ಎದುರಿಸಿ ಎಂದು ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಅವರು ಕಾಂಗ್ರೆಸ್ ಹೈಕಮಾಂಡ್ಗೆ ಎಚ್ಚರಿಕೆ ನೀಡಿದ್ದಾರೆ.
ಟಿಕೆಟ್ ಹಂಚಿಕೆ ಸಂಬಂಧ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್ ಲಾಡ್, ಕೂಡಲೇ ಬಳ್ಳಾರಿ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಬೇಕು ಮತ್ತು ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಬೇಕು ಎಂದು ಅಗ್ರಹಿಸಿದರು.
ಒಂದುವೇಳೆ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡದಿದ್ದರೆ, ಹೂವಿನ ಹಡಗಲಿ, ಕಂಪ್ಲಿ, ಹೊಸಪೇಟೆ, ಹರಪನಹಳ್ಳಿ ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ತಮ್ಮ ಬೆಂಬಲಿಗ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಸಹ ಅನಿಲ್ ಲಾಡ್ ಬೆದರಿಕೆ ಹಾಕಿದ್ದಾರೆ.
ಲಾಡ್ ಬೆದರಿಕೆ ತಂತ್ರಕ್ಕೆ ಪಂಪಾಪತಿ ತಿರುಗೇಟು:
ಇನ್ನು ಲಾಡ್ ಬೆದರಿಕೆ ತಂತ್ರಕ್ಕೆ ತಿರುಗೇಟು ನೀಡಿರುವ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಂಪಾಪತಿ ಅವರು, ಹೈಕಮಾಂಡ್ಗೆ ತಿಳಿ ಹೇಳುವ ನೈತಿಕತೆ ಅವರಿಗೆ ಇಲ್ಲ ಎಂದಿದ್ದಾರೆ.
ಅನಿಲ್ ಲಾಡ್ಗೆ ಅಕ್ರಮ ಗಣಿಗಾರಿಕೆಯಿಂದ ಗಳಿಸಿದ ದುಡ್ಡಿನ ದರ್ಪವಿದೆ, ಹೀಗಾಗಿ ಅವರು ದರ್ಪದ ಮಾತುಗಳನ್ನಾಡುತ್ತಿದ್ದಾರೆ. ಅವರಿಗೆ ಹಣ, ಅಧಿಕಾರ, ವಯಸ್ಸು ಮಾತ್ರ ಇದೆ. ಇಂಥವರಿಗೆಲ್ಲ ಕಾಂಗ್ರೆಸ್ ಹೆದರಲ್ಲ ಎಂದು ಪಂಪಾಪತಿ ಹೇಳಿದ್ದಾರೆ.