ಮಮತಾಗೆ ಘೇರಾವ್: ಪ್ರಧಾನಿ ವಿಷಾದ
ಎಸ್‌ಎಫ್‌ಐ ನಾಯಕನ ಹತ್ಯೆ ಪ್ರಕರಣ ಖಂಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನಿನ್ನೆ ದೆಹಲಿಯಲ್ಲಿ..
ನವದೆಹಲಿ: ಎಸ್‌ಎಫ್‌ಐ ನಾಯಕನ ಹತ್ಯೆ ಪ್ರಕರಣ ಖಂಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನಿನ್ನೆ ದೆಹಲಿಯಲ್ಲಿ ಘೇರಾವ್ ಹಾಕಿದ ಘಟನೆಯ ಬಗ್ಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪ್ರಧಾನಿ ಸಿಂಗ್ ಅವರು ಮಮತಾ ಅವರೊಂದಿಗೆ ಮಾತನಾಡಿದ್ದು, ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಬುಧವಾರ ಮುಖ್ಯಮಂತ್ರಿಗಳ ಆಪ್ತ ಮೂಲಗಳು ತಿಳಿಸಿವೆ.
ಮಮತಾ ಬ್ಯಾನರ್ಜಿ ಅವರು ಘೇರಾವ್ ಘಟನೆಯ ನಂತರ ಅನಾರೋಗ್ಯದ ಕಾರಣ ನೀಡಿ ಪ್ರಧಾನಿ ಭೇಟಿ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು.
ನಿನ್ನೆ ಮಮತಾ ಬ್ಯಾನರ್ಜಿ ಅವರು ತಮ್ಮ ಹಣಕಾಸು ಸಚಿವ ಅಮಿತ್ ಮಿತ್ರಾ ಅವರೊಂದಿಗೆ ಯೋಜನಾ ಆಯೋಗದ ಉಪಾಧ್ಯಕ್ಷ ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಅವರೊಂದಿಗೆ ಚರ್ಚಿಸಲು ಯೋಜನಾ ಭವನಕ್ಕೆ ಆಗಮಿಸಿದ್ದರು. ಈ ವೇಳೆ ಸಿಪಿಎಂ-ಎಸ್‌ಎಫ್‌ಐ ಕಾರ್ಯಕರ್ತರು ಘೇರಾವ್ ಹಾಕಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ರಕ್ಷಿಸಲು ಪೊಲೀಸರು ಯಶಸ್ವಿಯಾದರು. ಆದರೆ ಅಮಿತ್ ಮಿತ್ರಾ ಅವರು ಪ್ರತಿಭಟನಾಕಾರರ ಕೈಗೆ ಸಿಕ್ಕಿಬಿದ್ದರು. ಆಕ್ರೋಶಗೊಂಡಿದ್ದ ಕಾರ್ಯಕರ್ತರು ಮಿತ್ರ ಅವರನ್ನು ಎಳೆದಾಡಿದ ಘಟನೆ ನಡೆದಿತ್ತು.