ಇಂದು ಸಂಜೆ 'ಕೈ' 2ನೇ ಪಟ್ಟಿ ಪ್ರಕಟ?
ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಹೊರ ಬಿದ್ದು, ನಾಮಪತ್ರ ಸಲ್ಲಿಕೆಗೆ ಇನ್ನು ಐದೇ ದಿನ ಬಾಕಿ ಇದ್ದರೂ, ರಾಜಕೀಯ ಪಕ್ಷಗಳ ಟಿಕೆಟ್ ಫೈಟ್ ಅಂತ್ಯವಾಗುತ್ತಿಲ್ಲ...
ನವದೆಹಲಿ: ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಹೊರ ಬಿದ್ದು, ನಾಮಪತ್ರ ಸಲ್ಲಿಕೆಗೆ ಇನ್ನು ಐದೇ ದಿನ ಬಾಕಿ ಇದ್ದರೂ, ರಾಜಕೀಯ ಪಕ್ಷಗಳ ಟಿಕೆಟ್ ಫೈಟ್ ಅಂತ್ಯವಾಗುತ್ತಿಲ್ಲ. ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಇಂದು ಸಂಜೆ ತನ್ನ ಎರಡನೇ ಹಾಗೂ ಅಂತಿಮ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ ನ ಎರಡನೇ ಪಟ್ಟಿ ಸಿದ್ಧವಾಗಿದ್ದು, ಅದಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಂಕಿತ ಮಾತ್ರ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ವಿದೇಶ ಪ್ರವಾಸದಲ್ಲಿದ್ದ ಸೋನಿಯಾ ಇಂದು ದೆಹಲಿಗೆ ಆಗಮಿಸುತ್ತಿದ್ದು, ಸಂಜೆ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿ, ಬಳಿಕ ಪಟ್ಟಿ ಪ್ರಕಟಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈ ಸಂಬಂಧ ಈಗಾಗಲೇ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಸಭೆ ನಡೆಸುತ್ತಿದ್ದು, ಮಧುಸೂದನ್ ಮಿಸ್ತ್ರಿ, ಜಿತೇಂದ್ರ ಸಿಂಗ್, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಭೆಯಲ್ಲಿ ಭಾಗವಹಿಸಿದ್ದಾರೆ.