ಭುಲ್ಲರ್‌ಗೆ ಗಲ್ಲು ಖಾಯಂ
ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ತಮ್ಮ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಲು...
ನವದೆಹಲಿ: ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ತಮ್ಮ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿ ಎಂದು ದೆಹಲಿ ಸ್ಫೋಟ ಪ್ರಕರಣದ ಅಪರಾಧಿ ದೇವೇಂದ್ರ ಸಿಂಗ್ ಭುಲ್ಲರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
1993ರ ಕಾರ್ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಭುಲ್ಲರ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಅವರ ಪೀಠ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿ, ಮಹತ್ವದ ಆದೇಶ ನೀಡಿದೆ. ಅಲ್ಲದೆ ಶಿಕ್ಷೆ ಕಡಿತಕ್ಕೆ ವಿಳಂಬ ಮಾನದಂಡವಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪು, ಗಲ್ಲು ಶಿಕ್ಷೆ ಎದುರುಸುತ್ತಿರುವ ವೀರಪ್ಪನ್ ನ ನಾಲ್ವರು ಸಹಚರರು ಹಾಗೂ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ತಮಿಳುನಾಡಿನ ಮೂವರ ಗಲ್ಲು ಶಿಕ್ಷೆಯ ಮೇಲೂ ಪರಿಣಾಮ ಬೀರಲಿದೆ. ಸುಪ್ರೀಂ ಕೋರ್ಟ್ ಮುಂದೆ ಇಂಥಹ 20ಕ್ಕು ಹೆಚ್ಚು ಅರ್ಜಿಗಳಿದ್ದು, ಆ ಎಲ್ಲ ಪ್ರಕರಣಗಳಲ್ಲೂ ಇದೇ ತೀರ್ಪನ್ನೇ ಮಾರ್ಗದರ್ಶಿಯಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.
ಯುವ ಕಾಂಗ್ರೆಸ್ ನಾಯಕ ಎಂ.ಎಸ್. ಬಿಟ್ಟ ಅವರನ್ನು ಗುರಿಯಾಗಿಸಿಕೊಂಡು ಭುಲ್ಲರ್ ಕಾರ್ ಬಾಂಬ್ ಸ್ಫೋಟಿಸಿದ್ದ. ಈ ಘಟನೆಯಲ್ಲಿ 9 ಜನ ಮೃತಪಟ್ಟಿದ್ದರು. ಈ ಸಂಬಂಧ ಭುಲ್ಲರ್ ಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ನಂತರ ಭುಲ್ಲರ್ ಜನವರಿ 14, 2003ರಲ್ಲಿ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಮೇ 25, 2011ರಲ್ಲಿ ರಾಷ್ಟ್ರಪತಿಗಳು ಭುಲ್ಲರ್ ಅರ್ಜಿಯನ್ನು ವಜಾಗೊಳಿಸಿದ್ದರು.