ಶೀಘ್ರವೇ ಸೂಕ್ತ ಪ್ರಧಾನಿ ಅಭ್ಯರ್ಥಿ ಆಯ್ಕೆಮಾಡಿ: ಪವಾರ್
ಥಾಣೆ: ಅವಧಿಗೂ ಮುನ್ನವೆ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಮುಂದಾಗಬೇಕಿದೆ ಎಂದಿರುವ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು, ಕೂಡಲೆ ಸೂಕ್ತ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆಮಾಡಿ ಎಂದು ಶನಿವಾರ ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟಕ್ಕೆ ಸೂಚಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್, ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಯುಪಿಎ ಸರ್ಕಾರ ಕೂಡಲೇ ಸರ್ವ ಸದಸ್ಯರ ಸಭೆ ಕರೆದು ಸೂಕ್ತ ಪ್ರಧಾನಿ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಚರ್ಚೆ ನಡೆಸಬೇಕೆಂದು ಸಲಹೆ ನೀಡಿದ್ದಾರೆ.
ಲಂಕಾ ತಮಿಳರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಡಿಎಂಕೆ, ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದರಿಂದ ಸರ್ಕಾರಕ್ಕೆ ತಕ್ಕ ಮಟ್ಟಿಗೆ ಆಘಾತವಾಗಿದ್ದು, ಸುಭದ್ರ ಸರ್ಕಾರ ಸ್ಥಾಪಿಸಬೇಕಾದರೆ ಅವಧಿಗೂ ಮುನ್ನವೆ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಮುಂದಾಗಬೇಕು ಅದಕ್ಕಾಗಿ ಸೂಕ್ತ ಅಭ್ಯರ್ಥಿಯನ್ನು ತಕ್ಷಣ ಆಯ್ಕೆ ಮಾಡಬೇಕಿದೆ ಎಂದರು.