ಸಿಬಿಐ ವರದಿಯನ್ನು ಗಂಭೀರವಾಗಿ ಪರಿಗಣಿಸಲಿ: ಸುಷ್ಮಾ
ದೇಶಾದ್ಯಂತ ಭಾರೀ ಕೋಲಾಹಲ ಎಬ್ಬಿಸಿದ್ದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ...
ನವದೆಹಲಿ: ದೇಶಾದ್ಯಂತ ಭಾರೀ ಕೋಲಾಹಲ ಎಬ್ಬಿಸಿದ್ದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ, ಸಿಬಿಐ ನೀಡಿರುವ ತನಿಖಾ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿವ ಮುನ್ನ ಯುಪಿಎ ಸರ್ಕಾರ ವರದಿಯನ್ನು ಒರೆಗೆ ಹಚ್ಚಿ ಸತ್ಯಾಂಶವನ್ನು ತಿಳಿಯಬೇಕಿದೆ ಎಂದು ಶನಿವಾರ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಆಗ್ರಹಿಸಿದ್ದಾರೆ.
ಸಿಬಿಐ ಸಲ್ಲಿಸಿರುವ ವರದಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರಕರಣದಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ ಎಂದು ಸುಷ್ಮಾ ಆರೋಪಿಸಿದ್ದಾರೆ.
ಪ್ರಧಾನಿ ಅವರಿಗೆ ಕಲ್ಲಿದ್ದಲು ಹಗರಣದಿಂದ ಕ್ಲೀನ್ ಚೀಟ್ ನೀಡುವಂತೆ ಯುಪಿಎ ಸರ್ಕಾರ, ಸಿಬಿಐ ಮೇಲೆ ಒತ್ತಡ ಹೇರುತ್ತಿದೆ ಎಂದು ಸುಷ್ಮಾ ಅವರು ಸಾಮಾಜಿಕ ತಾಣ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ತಿಂಗಳು ಸಿಬಿಐ ತನ್ನ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆ ಸಂದರ್ಭದಲ್ಲಿ ಕೇಂದ್ರ ಕಾನೂನು ಸಚಿವ ಅಶ್ವಿನಿ ಕುಮಾರ್ ಅವರನ್ನೊಳಗೊಂಡ ಸಮಿತಿಯು ವರದಿಯನ್ನು ಪರಿಶೀಲಿಸುವಾಗ ಅದರಲ್ಲಿ ಹಲವು ತಿದ್ದುಪಡಿಗಳನ್ನು ಮಾಡಲಾಗಿದ್ದು, ಇದೆಲ್ಲ ಸತ್ಯಕ್ಕೆ ದೂರವಾಗಿವೆ ಎಂದು ಮಾದ್ಯಮಗಳಲ್ಲಿ ವರದಿಯಾಗಿದೆ. ಆದ್ದರಿಂದ ಸರ್ಕಾರ ಕಲ್ಲಿದ್ದಲು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸುಷ್ಮಾ ಒತ್ತಾಯಿಸಿದ್ದಾರೆ.