ಪೋಷಕರಿಂದಲೇ ಆರುಷಿ ಕೊಲೆ: ಸಿಬಿಐ ವಾದ
ಘಜೀಯಾಬಾದ್: 2008ರಲ್ಲಿ ನಡೆದ ಆರುಷಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಹೆತ್ತವರೆ ಮಗಳನ್ನು ಕೊಲೆ ಮಾಡಿರುವುದಾಗಿ ಸಾಂದರ್ಭಿಕ ಸಾಕ್ಷ್ಯಗಳಿಂದ ತಿಳಿದುಬಂದಿದೆ ಎಂದು ಹೈಕೋರ್ಟ್ಗೆ ಮಂಗಳವಾರ ತಿಳಿಸಿದೆ.
ಹೈಕೋರ್ಟ್ನಲ್ಲಿ ಇಂದು ಆರುಷಿ ಕೊಲೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ವಾದ ಮಂಡಿಸಿದ ಸಿಬಿಐನ ಅಧಿಕಾರಿ ಎಜಿಎಲ್ ಕೌಲ್ ಅವರು, ದಂತವೈದ್ಯರಾಗಿರುವ ರಾಜೇಶ್ ಹಾಗು ನೂಪುರ್ ತಲ್ವಾರ್ ಕೊಲೆ ನಡೆದ ದಿನ ನೋಯ್ಡಾದ ತಮ್ಮ ಮನೆಯಲ್ಲಿ ಇದ್ದುದ್ದಾಗಿ, ಕೊಲೆ ನಡೆದ ದಿನ ಮನೆಗೆ ಹೊರಗಿನಿಂದ ಒಳಗೆ ಯಾರು ಬಂದಿಲ್ಲ ಅಂದ ಮೇಲೆ ಆರೂಷಿ ಕೊಲೆಯನ್ನು ಇವರೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
2010ರಲ್ಲಿ ಸಿಬಿಐ ಸಲ್ಲಿದ ವರದಿಯಲ್ಲಿ ಆರುಷಿ ಕೊಲೆಯಲ್ಲಿ ಹೆತ್ತವರ ಕೈವಾಡ ಇರುವುದಾಗಿ ಸಿಬಿಐ ಸಂದೇಹ ವ್ಯಕ್ತಪಡಿಸಿತ್ತು. ಆ ಸಂದರ್ಭದಲ್ಲಿ ಕೊಲೆಗೆ ಪುಷ್ಠಿ ನೀಡುವಂತ ಸಾಕ್ಷ್ಯಧಾರಗಳ ಕೊರತೆ ಇತ್ತು ಎಂದು ತನಿಖಾ ಅಧಿಕಾರಿ ಕೌಲ್ ಚಾರ್ಜ್ಶೀಟ್ನಲ್ಲಿ ತಿಳಿಸಿದ್ದರು.
13 ವರ್ಷದ ಆರುಷಿ 2008ರಲ್ಲಿ ತನ್ನ ಮನೆಯಲ್ಲೇ ಕೊಲೆಯಾಗಿದ್ದಳು. ಪೊಲೀಸರ ತನಿಖೆಯಲ್ಲಿ ಹೇಮರಾಜ್(ಕೆಲಸದಾಳು) ಕೊಲೆ ಮಾಡಿರುವುದಾಗಿ ಶಂಕಿಸಲಾಗಿತ್ತು. ಆದರೆ ಕೆಲವು ಘಂಟೆಗಳ ನಂತರ ಹೇಮರಾಜ್ನ ಮೃತದೇಹ ಮನೆಯ ಮಹಡಿಯಲ್ಲಿ ದೊರೆತಾಗ, ಆರುಷಿಯ ಕೊಲೆ ಪ್ರಕರಣ ಪೊಲೀಸರಿಗೆ ಕಗ್ಗಂಟಾಗಿ ಕಾಡಿತ್ತು.
ಸುಧೀರ್ಘ ತನಿಖೆ ನಡೆಸಿದ ಸಿಬಿಐ ಕೆಲವೊಂದು ಸಾಂಧರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಆರುಷಿ ಕೊಲೆಯನ್ನು ರಾಜೇಶ್ ಮತ್ತು ನೂಪುರ್ ಸೇರಿ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದು, ನ್ಯಾಯಾಲಯದಲ್ಲಿ ವಾದ ಮಂಡಿಸಿದೆ.