ಅನಾಮಧೇಯ ಕರೆ: ಏರ್ಪೋರ್ಟ್ನಲ್ಲಿ ಕಟ್ಟೆಚ್ಚರ
ಮಾಸ್ಕೋ: ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನ ಪುಲ್ಕೋವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಧೇಯ ಕರೆ ಹಿನ್ನಲೆಯಲ್ಲಿ ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.
ಪ್ರಯಾಣಿಕರ ಸುರಕ್ಷತೆಗಾಗಿ ಪುಲ್ಕೋವ ವಿಮಾನ ನಿಲ್ದಾಣದಲ್ಲಿದ್ದ 1500 ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಶುಕ್ರವಾರ ಮುಂಜಾನೆ ವಿಮಾನ ನಿಲ್ದಾಣದಕ್ಕೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದಿದ್ದಾನೆ. ಕೂಡಲೆ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಶ್ವಾನದಳದ ಮೂಲಕ ತಪಾಸಣೆ ನಡೆಸಿದ್ದಾರೆ. ನಿಲ್ದಾಣದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಸಿಗದಿದ್ದಾಗ ಇದೊಂದು ಹುಸಿ ಕರೆ ಎಂದು ತಿಳಿದುಬಂದಿದೆ.
ಈ ಕಾರಣದಿಂದ ನಿಲ್ದಾಣದಿಂದ ಹೊರಡಬೇಕಿದ್ದ 20 ವಿಮಾನಗಳ ಹಾರಾಟವನ್ನು ತಡೆಹಿಡಿಯಲಾಗಿತ್ತು.