ಪಾಕ್ ಮಾಜಿ ಅಧ್ಯಕ್ಷ ಮುಷರ್ರಫ್ ಬಂಧನ
ಪಾಕಿಸ್ತಾನದ ಮಾಜಿ ಸೇನಾ ಆಡಳಿತಗಾರ ಜನರಲ್ ಫರ್ವೇಜ್ ಮುಷರ್ರಫ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಸೇನಾ ಆಡಳಿತಗಾರ ಜನರಲ್ ಫರ್ವೇಜ್ ಮುಷರ್ರಫ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಮೇ. 11ರಂದು ನಡೆಯುವ ಚುನಾವಣೆಯಲ್ಲಿ ಮತ್ತೆ ರಾಜಕೀಯ ವೃತ್ತಿ ಜೀವನವನ್ನು ಆರಂಭಿಸಬೇಕೆಂಬ ಪಾಕ್ ಮಾಜಿ ಅಧ್ಯಕ್ಷ ಮುಷ್ ಕನಸು ನುಚ್ಚುನೂರಾಗಿದೆ.
ಇಸ್ಲಾಮಾಬಾದ್‌ನ ಹೊರವಲಯಲ್ಲಿದರುವ ಅವರ ನಿವಾಸದಲ್ಲಿ ಮುಷರ್ರಫ್ ಅವರನ್ನು ನಿನ್ನೆ ತಡರಾತ್ರಿ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮೊಹಮ್ಮದ್ ಖಲಿದ್ ಅವರು ಶುಕ್ರವಾರ ತಿಳಿಸಿದ್ದಾರೆ.
ಮುಷರ್ರಫ್ ಅವರನ್ನು ಇಂದು ಬೆಳಗ್ಗೆ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರ್ ಪಡಿಸಲಾಗಿದ್ದು, ಕೋರ್ಟ್ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ ಎಂದು ಖಲಿದ್ ಹೇಳಿದ್ದಾರೆ.
2007ರ ತುರ್ತು ಪರಿಸ್ಥಿತಿ ವೇಳೆ 60 ನ್ಯಾಯಾಧೀಶರನ್ನು ವಜಾ ಮಾಡಿದ ಪ್ರಕರಣ ಸಂಬಂಧ ನಿನ್ನೆ ಮಧ್ಯಂತರ ಜಾಮೀನು ಅವಧಿ ವಿಸ್ತರಿಸುವಂತೆ ಕೋರಿ ಮುಷರ್ರಫ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ಇಸ್ಲಾಮಾಬಾದ್ ಹೈಕೋರ್ಟ್, ತಕ್ಷಣವೇ ಮುಷರ್ರಫ್ ಅವರನ್ನು ಬಂಧಿಸುವಂತೆ ಆದೇಶಿಸಿತ್ತು. ಆದೇಶ ಕಿವಿಗೆ ಬಿದ್ದೊಡನೆ ಎದ್ದೆನೋ ಬಿದ್ದೆನೋ ಎಂಬಂತೆ ಮುಷ್ ನ್ಯಾಯಾಲಯದಿಂದ ತಪ್ಪಿಸಿಕೊಂಡಿದ್ದರು.