ದೆಹಲಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ
ದೆಹಲಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಂತ ಕ್ರೂರ ರೀತಿಯಲ್ಲಿ ಅತ್ಯಾಚಾರವೇಸಗಿ ಪರಾರಿಯಾಗಿದ್ದ ..
ನವದೆಹಲಿ: ದೆಹಲಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಂತ ಕ್ರೂರ ರೀತಿಯಲ್ಲಿ ಅತ್ಯಾಚಾರವೇಸಗಿ ಪರಾರಿಯಾಗಿದ್ದ ಆರೋಪಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ದೆಹಲಿಯಲ್ಲಿ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ದೆಹಲಿ ಪೊಲೀಸರು, ಇಂದು ಬಿಹಾರದ ಮುಜಾಫರಪುರ ಜಿಲ್ಲೆಯ ಚಿಕ್ನೌಟದಲ್ಲಿ 22 ವರ್ಷದ ರೇಪಿಸ್ಟ್ನನ್ನು ಬಂಧಿಸಿದ್ದಾರೆ.
ಸ್ಥಳೀಯ ಪೊಲೀಸರ ಸಹಾಯದೊಂದಿಗೆ ದೆಹಲಿ ಪೊಲೀಸ್ ತಂಡ ಆರೋಪಿ ಮನೋಜ್ ಕುಮಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತನ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
ದೆಹಲಿ ಪೊಲೀಸರು ಆರೋಪಿ ಮನೋಜ್ ಕುಮಾರ್ನನ್ನು ಬಿಹಾರ್ ಕೋರ್ಟ್ಗೆ ಹಾಜರ್ಪಡಿಸಿದ್ದು, ಆತನನ್ನು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.
5 ವರ್ಷದ ಕಂದಮ್ಮನ ಮೇಲೆ ಸತತ 4 ದಿನಗಳ ಕಾಲ ಅತ್ಯಾಚಾರವೆಸಗಿರುವ ಘಟನೆ ನಿನ್ನೆ ಬೆಳಕಿಗೆ ಬಂದಿದೆ. ಆ ರಾಕ್ಷಸನ ಕಾಮತೃಷೆಗೆ ಬಲಿಯಾದ ಪುಟ್ಟ ಬಾಲಕಿ ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಈ ಘಟನೆಯಿಂದಾಗಿ ಮತ್ತೊಮ್ಮೆ ದೇಶ ತಲೆತಗ್ಗಿಸುವಂತಾಗಿದೆ.
ಇನ್ನು ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವು ಸುದ್ದಿಯಾಗುತ್ತಿದ್ದಂತೆ ಮತ್ತೆ ದೆಹಲಿಯಲ್ಲಿ ಪ್ರತಿಭಟನೆಯ ಕಾವು ಏರತೊಡಗಿದೆ.