ಮಂಡ್ಯದಲ್ಲಿ ಭುಗಿಲೆದ್ದ ಬಂಡಾಯ: ಆತ್ಮಾನಂದ ರಾಜಿನಾಮೆ
ಮಂಡ್ಯ ಜಿಲ್ಲಾ ಕಾಂಗ್ರೆಸ್ನಲ್ಲಿ ಭುಗಿಲೆದ್ದ ಬಂಡಾಯ ಸದ್ಯಕ್ಕೆ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ..
ಮಂಡ್ಯ: ಮಂಡ್ಯ ಜಿಲ್ಲಾ ಕಾಂಗ್ರೆಸ್ನಲ್ಲಿ ಭುಗಿಲೆದ್ದ ಬಂಡಾಯ ಸದ್ಯಕ್ಕೆ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಆತ್ಮಾನಂದ ಅವರು ತಮ್ಮ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ರಾಜಿನಾಮೆ ನೀಡಿದ್ದಾರೆ.
ಮಂಡ್ಯಯಿಂದ ರೆಬಲ್ ಸ್ಟಾರ್ ಅಂಬರೀಷ್ ಅವರಿಗೆ ಟಿಕೆಟ್ ನೀಡಿದ್ದರಿಂದ ತೀವ್ರ ಅಸಮಾದಾನಗೊಂಡಿದ್ದ ಆತ್ಮಾನಂದ ಅವರು, ಇಂದು ಫ್ಯಾಕ್ಸ್ ಮೂಲಕ ತಮ್ಮ ರಾಜಿನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ರವಾನಿಸಿದ್ದಾರೆ.
ಇನ್ನು ತಮ್ಮ ರಾಜಿನಾಮೆ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಸಿದ ಆತ್ಮಾನಂದ, ಪ್ರಸಕ್ತ ವಾತಾವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲು ತಮ್ಮಿಂದ ಸಾಧ್ಯವಿಲ್ಲ. ನಾನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾತ್ರ ರಾಜಿನಾಮೆ ನೀಡಿದ್ದೇನೆ. ಆದರೆ ಕಾರ್ಯಕರ್ತನಾಗಿ ಪಕ್ಷದಲ್ಲೇ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಒಂದೇಡೆ ಟಿಕೆಟ್ ವಂಚಿತ ಬಂಡಾಯ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರು ಪಕ್ಷೇತರ ಅಭ್ಯರ್ಥಿಯಾಗಿ ಶ್ರೀರಂಗಪಟ್ಟಣ ಹಾಗೂ ಮಂಡ್ಯದಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ತಮಗೆ ಟಿಕೆಟ್ ಕೈ ತಪ್ಪಿಸಿದ ಅಂಬಿ ವಿರುದ್ಧ ಸೆಡ್ಡು ಹೊಡೆದಿದ್ದಾರೆ. ಮತ್ತೊಂದೆಡೆ ಟಿಕೆಟ್ ಹಂಚಿಕೆ ಗೊಂದಲದಿಂದ ಬೇಸತ್ತಿರುವ ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರು ಚುನಾವಣಾ ಪ್ರಚಾರದಿಂದ ದೂರ ಉಳಿಯುವ ಸಾಧ್ಯತೆ ಇದ್ದು, ಒಟ್ಟಾರೆ ಮಂಡ್ಯದ ಬಂಡಾಯ ರೆಬಲ್ ಸ್ಟಾರ್ಗೆ ಮುಳುವಾಗಲಿದೆ ಎನ್ನಲಾಗುತ್ತಿದೆ.