1993ರಿಂದ ನಡೆದ ಎಲ್ಲ ಕಲ್ಲಿದ್ದಲು ಗಣಿಗಳ ಹಂಚಿಕೆ ಅಕ್ರಮ: ಸಮಿತಿ
1993ರಿಂದ 2010ರವರೆಗೆ ನಡೆದ ಎಲ್ಲ ಕಲ್ಲಿದ್ದಲು ಗಣಿಗಳ ಹಂಚಿಕೆ 'ಅನಧಿಕೃತ ಮತ್ತು ಅಕ್ರಮ' ಎಂದು ಸಂಸದೀಯ..
ನವದೆಹಲಿ: 1993ರಿಂದ 2010ರವರೆಗೆ ನಡೆದ ಎಲ್ಲ ಕಲ್ಲಿದ್ದಲು ಗಣಿಗಳ ಹಂಚಿಕೆ 'ಅನಧಿಕೃತ ಮತ್ತು ಅಕ್ರಮ' ಎಂದು ಸಂಸದೀಯ ಸಮಿತಿ ಮಂಗಳವಾರ ಹೇಳಿದೆ. ಅಲ್ಲದೆ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ.
ಕಲ್ಲಿದ್ದಲು ಮತ್ತು ಅದಿರು ಹಗರಣ ಕುರಿತು ಸ್ಥಾಯಿ ಸಮಿತಿ ನೀಡಿದ್ದ ವರದಿಯನ್ನು ಇಂದು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಕಲ್ಲಿದ್ದಲು ಗಣಿಗಳ ಹಂಚಿಕೆಯನ್ನು ಪಾರದರ್ಶಕವಾಗಿ ನಡೆದಿಲ್ಲ ಮತ್ತು ಅಧಿಕಾರಿ ದುರ್ಬಳಕೆ ಮಾಡಿಕೊಂಡು ಕೆಲವೇ ಕೆಲವರಿಗೆ ಮಾತ್ರ ನೈಸರ್ಗಿಕ ಸಂಪನ್ಮೂಲಗಳನ್ನು ಹಂಚಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅನಧಿಕೃತವಾಗಿ ಗಣಿ ಗುತ್ತಿಗೆ ನೀಡಲಾಗಿದ್ದು, ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ ಬ್ಯಾನರ್ಜಿ ಅವರು ಹೇಳಿದ್ದಾರೆ.