ನಾರಾಯಣಗೌಡ ನಿವಾಸದ ಮೇಲೆ ದಾಳಿ, 41 ಲಕ್ಷ ರು. ವಶ
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ನಿವಾಸದ ಮೇಲೆ ಚುನಾವಣಾ ಅಧಿಕಾರಿಗಳು ಮಂಗಳವಾರ ದಾಳಿ..
ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ನಿವಾಸದ ಮೇಲೆ ಚುನಾವಣಾ ಅಧಿಕಾರಿಗಳು ಮಂಗಳವಾರ ದಾಳಿ ಮಾಡಿದ್ದು, ಅವರ ನಿವಾಸದಲ್ಲಿ 41 ಲಕ್ಷ ರುಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಅಭ್ಯರ್ಥಿಯೊಬ್ಬರಿಗೆ ಸೇರಿದ್ದು ಎನ್ನಲಾದ 41 ಲಕ್ಷ ರುಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇನ್ನು ದಾಳಿ ಬಗ್ಗೆ ಪ್ರತಿಕ್ರಿಯಿಸಿದ ನಾರಯಣಗೌಡ, ತಮ್ಮ ನಿವಾಸದಲ್ಲಿ ಸಿಕ್ಕಿದ್ದು ಅಕ್ರಮ ಹಣ ಅಲ್ಲ. ಅದು ವೀರಶೈವ ಸಹಕಾರಿ ಬ್ಯಾಂಕ್ನಲ್ಲಿ ಆಸ್ತಿ ಅಡವಿಟ್ಟು ಪಡೆದ ಹಣ ಎಂದು ಸ್ಪಷ್ಟಿಕರಣ ನೀಡಿದ್ದಾರೆ.
ತಾವು ಸಾಲ ಪಡೆದ ಹಣವನ್ನು ಅಕ್ರಮ ಹಣವೆಂದು ತಪ್ಪಾಗಿ ಗ್ರಹಿಸಿ, ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಾನು ಎಂದೂ ಸಮಾಜದ್ರೋಹಿ ಕೆಲಸ ಮಾಡುವುದಿಲ್ಲ. ಕನ್ನಡಕ್ಕಾಗಿ ದುಡಿಯುವವ ನಾನು. ಈ ಘಟನೆಯಿಂದ ನನಗೆ ಬೇಸರವಾಗಿದೆ ಎಂದಿದ್ದಾರೆ. ಅಲ್ಲದೆ ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ಸೂಕ್ತ ದಾಖಲೆ ನೀಡುವುದಾಗಿ ಅವರು ಹೇಳಿದ್ದಾರೆ.