ಬೆಂಗಳೂರು ಸ್ಫೋಟ ಪ್ರಕರಣ: ಮೂವರ ಬಂಧನ
ಬೆಂಗಳೂರಿನ ಬಿಜೆಪಿ ಕಾರ್ಯಾಲಯದ ಬಳಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈಯಲ್ಲಿ ಮೂವರು...
ಬೆಂಗಳೂರು: ಬೆಂಗಳೂರಿನ ಬಿಜೆಪಿ ಕಾರ್ಯಾಲಯದ ಬಳಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈಯಲ್ಲಿ ಮೂವರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.
ತಿರುನಲ್ವೇಲಿ ಮೂಲದ ಪೀರ್ ಮೊಹಿದ್ದೀನ್ ಮತ್ತು ಬಶೀರ್ ಎಂಬವರನ್ನು ಪೊಲೀಸರು ಸೋಮವಾರ ತಡರಾತ್ರಿ ಚೆನ್ನೈನ ಲಾಡ್ಜ್‌ವೊಂದರಿಂದ ಬಂಧಿಸಿದ್ದಾರೆ. ಅದೇ ವೇಳೆ ಇನ್ನೊಬ್ಬ ಶಂಕಿತ ಕಿಚನ್ ಬುಹಾರಿ ಎಂಬಾತನನ್ನು ಮಧುರೈನಿಂದ ಬಂಧಿಸಲಾಗಿದೆ.
ಈ ಮೂವರು ವ್ಯಕ್ತಿಗಳು ಬಾಂಬ್ ಸ್ಫೋಟಕ್ಕೆ ಸಹಕರಿಸಿದವರಾಗಿದ್ದು, ಪ್ರಸ್ತುತ ಪ್ರಕರಣದ ಮುಖ್ಯ ರುವಾರಿಗಳನ್ನು ಪತ್ತೆ ಹಚ್ಚಬೇಕಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ತಮಿಳ್ನಾಡು ಪೊಲೀಸರ ಸಹಕಾರದೊಂದಿಗೆ ಬೆಂಗಳೂರು ಪೊಲೀಸರು ಆರೋಪಿಗಳಿಗಾಗಿ ಜಾಲಾಡಿದ್ದು, ಸೋಮವಾರ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಇದೇ ಪ್ರಕರಣದ ಶಂಕಿತ 4 ಆರೋಪಿಗಳನ್ನು ಕೇರಳದಿಂದ ಬಂಧಿಸಲಾಗಿತ್ತು.
ಇದೀಗ ಬಂಧಿತ ವ್ಯಕ್ತಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರಲಾಗುವುದು ಎಂದು ಬಲ್ಲಮೂಲಗಳು ಹೇಳಿವೆ.
ಬೆಂಗಳೂರಿನಲ್ಲಿ ಏಪ್ರಿಲ್ 17ರಂದು ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 16 ಮಂದಿಗೆ ಗಾಯಗಳಾಗಿದ್ದವು.
ಕಳೆದ ವಾರವಷ್ಟೇ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವವರ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಗಳಿಗೆ 5 ಲಕ್ಷ ರು ಬಹುಮಾನವನ್ನು ರಾಜ್ಯ ಸರ್ಕಾರ ಘೋಷಿಸಿತ್ತು.