ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಖ್ಯಾತ ಹಿನ್ನೆಲೆ ಗಾಯಕಿ ಶಂಷಾದ್ ಬೇಗಂ ನಿಧನ

"ಮೇರೆ ಪಿಯಾ ಗಯೇ ರಂಗೂನ್‌', 'ಕಭೀ ಆರ್ ಕಭೀ ಪಾರ್‌', ಮೊದಲಾದ ಸುಮಧುರ ಗೀತೆಗಳನ್ನು ಹಾಡಿ ಜನಮನಸ್ಸನ್ನು ಗೆದ್ದಿದ್ದ ಬೇಗಂ ಇನ್ನು ನೆನಪು ಮಾತ್ರ...

Rashmi Kasaragodu
Updated On : 24 Apr 2013, 12:32 pm

ನವದೆಹಲಿ: ಹಿಂದಿ ಚಲನಚಿತ್ರ ರಂಗದ ಖ್ಯಾತ ಹಿನ್ನೆಲೆ ಗಾಯಕಿ ಶಂಷಾದ್ ಬೇಗಂ ಮುಂಬೈಯಲ್ಲಿರುವ ತಮ್ಮ ಸ್ವಗೃಹದಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಪಂತಂಗಾ  ಚಿತ್ರದ "ಮೇರೆ ಪಿಯಾ ಗಯೇ ರಂಗೂನ್‌', ಆರ್‌ಪಾರ್ ಚಿತ್ರದ 'ಕಭೀ ಆರ್ ಕಭೀ ಪಾರ್‌', ಕಿಸ್ಮತ್ ಚಿತ್ರದ 'ಕಜ್‌ರಾ ಮೊಹಬ್ಬತ್‌ವಾಲಾ' ಮೊದಲಾದ ಸುಮಧುರ ಗೀತೆಗಳನ್ನು ಹಾಡಿ ಜನಮನಸ್ಸನ್ನು ಗೆದ್ದಿದ್ದ ಬೇಗಂ ಇನ್ನು ನೆನಪು ಮಾತ್ರ.

ಕೆಲವು ತಿಂಗಳುಗಳಿಂದ ಆಕೆ ಅನಾರೋಗ್ಯಕ್ಕೀಡಾಗಿದ್ದು, ಆಸ್ಫತ್ರೆಗೆ ದಾಖಲಿಸಲಾಗಿತ್ತು. ಕಳೆದ ರಾತ್ರಿ ಆಕೆ ಕೊನೆಯುಸಿರೆಳೆದಿದ್ದಾರೆ. ಆಪ್ತರು ಹಾಗು ಗೆಳೆಯರು ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬೇಗಂರ ಪುತ್ರಿ ಉಷಾ ಮಾಧ್ಯಮದವರಲ್ಲಿ ಹೇಳಿದ್ದಾರೆ.

1919, ಏಪ್ರಿಲ್ 14ರಂದು ಪಂಜಾಬ್‌ನ ಅಮೃತಸರದಲ್ಲಿ ಜನಿಸಿದ ಬೇಗಂ 1947 ಡಿಸೆಂಬರ್ 16ರಂದು  ಲಾಹೋರ್‌ನಲ್ಲಿ ಪೇಶಾವರ್ ರೇಡಿಯೋದಲ್ಲಿ ಕೆಲಸ ಆರಂಭಿಸಿದ್ದರು. ರೇಡಿಯೋದಲ್ಲಿ ಅವರ ಮಾತಿನ ಮೋಡಿಗೆ, ಸುಮಧುರ ಆಲಾಪನೆಗೆ ಜನರು ಮಾರುಹೋದರು. ಈ ಸಂದರ್ಭದಲ್ಲೇ ಆಕೆಯ ಗಾಯನ ಕೌಶಲ್ಯವನ್ನು ಕಂಡ ಬಾಲಿವುಡ್‌ನ ಸಂಗೀತ ನಿರ್ದೇಶಕರು ಹಿನ್ನೆಲೆ ಗಾಯನಕ್ಕೆ ಅವಕಾಶವನ್ನಿತ್ತು ಪ್ರೋತ್ಸಾಹಿಸಿದರು.

1955ರಲ್ಲಿ ತನ್ನ ಪತಿ ಗಣ್‌ಪತ್ ಲಾಲ್ ಭಟ್ಟೋ ನಿಧನರಾದ ನಂತರ ಪುತ್ರಿ ಉಷಾ ರತ್ನ ಮತ್ತು ಅಳಿಯನ ಜತೆ ಬೇಗಂ ಮುಂಬೈಯಲ್ಲಿ ವಾಸವಾಗಿದ್ದರು. ಖ್ಯಾತ ನಟಿ ಸಾಯಿರಾ ಬಾನು, ಶಂಷಾದ್ ಬೇಗಂರ ಮೊಮ್ಮಗಳು.

ಎವರ್ ಗ್ರೀನ್ ಹಿಟ್ಸ್‌ಗಳಾದ 'ಕಹೀ ಪೇ ನಿಗಾಹೆ ಕಹೀ ಪೆ ನಿಶಾನಾ', 'ಬೂಜ್ ಮೇರಾ ಕ್ಯಾ ನಾಮ್ ರೇ', 'ಸಯ್ಯಾ ದಿಲ್ ಮೆ ಆನಾ ರೇ', 'ಲೇಕೆ ಪೆಹಲಾ ಪೆಹಲಾ ಪ್ಯಾರ್‌', 'ಚೋಡ್ ಬಾಬುಲ್ ಕಾ ಘರ್‌' ಮೊದಲಾದ ಹಾಡುಗಳನ್ನು ಹಾಡಿದ ಖ್ಯಾತಿ ಬೇಗಂನದ್ದು.

ಚಲನಚಿತ್ರಗಳಲ್ಲಿ ಹಿನ್ನೆಲೆಗಾಯನದ ಜತೆಗೆ ಬೇಗಂ ಹಲವಾರು ಭಕ್ತಿಗೀತೆ ಹಾಗು ಗಜಲ್‌ಗಳನ್ನೂ ಹಾಡಿದ್ದಾರೆ.

ಶಂಷಾದ್ ಬೇಗಂ ಸ್ವತಃ ತಾನು ನೋಡಲು ಚೆನ್ನಾಗಿಲ್ಲ ಎಂಬ ಕೀಳರಿಮೆ ಹೊಂದಿರುವ ಕಾರಣ, ತೆರೆಯ ಮರೆಯಲ್ಲೇ ಇರಲು ಬಯಸಿದ್ದರು ಮಾತ್ರವಲ್ಲದೆ ಫೋಟೋ ತೆಗೆಯಲು ನಿರಾಕರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಆದಾಗ್ಯೂ, ಬೇಗಂ ತೆರೆಯ ಮರೆಯಲ್ಲಿದ್ದರೂ, ಮುಪ್ಪಡರಿದ್ದರೂ ಆಕೆಯ ಅದ್ಭುತ ಕಂಠಸಿರಿಯಿಂದ ಹೊಮ್ಮಿದ ಹಾಡುಗಳು ಮಾತ್ರ ಸ್ಮರಣೀಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement