ಸವಿತ ಸಾವಿನ ಪ್ರಕರಣ: ಆಸ್ಪತ್ರೆ ವಿರುದ್ದ ತಂದೆ ಕಾನೂನು ಸಮರ
ದಂತ ವೈದ್ಯೆ ಸವಿತ ಸಾವಿನ ಪ್ರಕರಣದಲ್ಲಿ ಸೂಕ್ತ ತನಿಖೆ ಆಗದ ಕಾರಣ ಐರಿಷ್ ಆಸ್ಪತ್ರೆಯ ವಿರುದ್ದ ಕಾನೂನು ಸಮರ...
ಲಂಡನ್: ದಂತ ವೈದ್ಯೆ ಸವಿತ ಹಾಲಪ್ಪನವರ್ ಸಾವಿನ ಪ್ರಕರಣದಲ್ಲಿ ಸೂಕ್ತ ತನಿಖೆ ಆಗದ ಕಾರಣ ಐರಿಷ್ ಆಸ್ಪತ್ರೆಯ ವಿರುದ್ದ ಕಾನೂನು ಸಮರ ನಡೆಸಲು ಸವಿತ ತಂದೆ ಅಂದಾನಪ್ಪಯಳಗಿ ಅವರು ಮುಂದಾಗಿದ್ದಾರೆ.
ಐರಿಷ್ನ ಡೈಲಿ ಸ್ಟಾರ್ ಪತ್ರಿಕೆಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಸವಿತ ಸಾವಿನ ಸುತ್ತ ಹಲವಾರು ಸಂಶಯಗಳು ಸುಳಿದಾಡುತ್ತಿದ್ದು, ಪ್ರಕರಣ ನಡೆದು 7 ತಿಂಗಳುಗಳೇ ಕಳೆದರೂ, ತನಿಖೆಯಿಂದ ಸಾವಿಗೆ ನಿಖರ ಕಾರಣ ದೊರೆತ್ತಿಲ್ಲ. ಹೀಗಾಗಿ ಆಸ್ಪತ್ರೆ ವಿರುದ್ದ ಕಾನೂನು ಸಮರ ನಡೆಸುತ್ತೇನೆ.
ಐರಿಷ್ ಸರ್ಕಾರದಿಂದ ಪ್ರಕರಣಕ್ಕೆ ಸೂಕ್ತ ನ್ಯಾಯ ದೊರಕುವ ಭರವಸೆ ಇಲ್ಲ. ಆದ್ದರಿಂದ ಗಾಲ್ವೆ ಯೂನಿರ್ವಸಿಟಿ ಆಸ್ಪತ್ರೆ ವಿರುದ್ದ ಕಾನೂನು ಸಮರ ನಡೆಸುವುದಾಗಿ ಸವಿತ ತಂದೆ ಅಂದಾನಪ್ಪ ಹೇಳಿದ್ದಾರೆ.
ಐರಿಷ್ ಸರ್ಕಾರವೇ ಆಗಲಿ, ಆಸ್ಪತ್ರೆಯ ವೈದ್ಯರೇ ಆಗಲಿ ನೈತಿಕ ಹೊಣೆ ಹೊತ್ತು ಸಾವಿಗೆ ನಿಖರ ಕಾರಣ ನೀಡಬೇಕು. ಆದರೆ ಅವರು ತನಿಖೆ ಹೆಸರಲ್ಲಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಐರಿಷ್ ಸರ್ಕಾರದ ತನಿಖೆಯಿಂದ ಸವಿತ ಸಾವಿನ ಪ್ರಕರಣಕ್ಕೆ ನ್ಯಾಯ ಸಿಗುವ ಭರವಸೆ ಕಳೆದುಕೊಂಡಿದ್ದೇನೆ. ಹಾಗಾಗಿಯೆ ಹತಾಶನಾಗಿ ಈ ನಿರ್ಧಾರಕ್ಕೆ ಬಂದಿದ್ದಾಗಿ ಅಂದಾನಪ್ಪ ತಿಳಿಸಿದರು.
ಐರಿಷ್ ಕಾನೂನಿನಲ್ಲಿ ಗರ್ಭಪಾತಕ್ಕೆ ಅವಕಾಶ ಇಲ್ಲ ಎಂಬ ನೆಪ ಒಡ್ಡಿದ್ದ ಗಾಲ್ವೆ ಯೂನಿರ್ವಸಿಟಿ ಆಸ್ಪತ್ರೆ, ತುಂಬು ಗರ್ಭಿಣಿಯಾಗಿದ್ದ ಬೆಳಗಾವಿ ಮೂಲದ ಸವಿತ ಹಾಲಪ್ಪನವರ್ ಸಾವಿಗೆ ಕಾರಣವಾಗಿತ್ತು.