ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾನೂನು ಸಚಿವರ ರಾಜಿನಾಮೆ ಇಲ್ಲ: ಪ್ರಧಾನಿ

ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್ ರಾಜಿನಾಮೆ ನೀಡುವುದಿಲ್ಲ ಎಂದು ಪ್ರಧಾನಿ ಮನ್‌ಮೋಹನ್ ಸ್ಪಷ್ಟಪಡಿಸಿದ್ದಾರೆ. ಕಲ್ಲಿದ್ದಲು ಹಗರಣದ ತನಿಖೆ ನಡೆಸಿ ಸಿಬಿಐ...

Rashmi Kasaragodu
Updated On : 27 Apr 2013, 3:01 am

ನವದೆಹಲಿ: ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್ ರಾಜಿನಾಮೆ ನೀಡುವುದಿಲ್ಲ ಎಂದು ಪ್ರಧಾನಿ ಮನ್‌ಮೋಹನ್ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್ ಕಲ್ಲಿದ್ದಲು ಹಗರಣದ ತನಿಖೆ ನಡೆಸಿ ಸಿಬಿಐ ಸಿದ್ಧಪಡಿಸಿದ ಕರಡು ವರದಿ ಪರಿಶೀಲಿಸಿರುವುದರ ಬಗ್ಗೆ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಸಚಿವರು ರಾಜಿನಾಮೆ ನೀಡಬೇಕೆಂದು ವಿಪಕ್ಷಗಳು ಒತ್ತಾಯಿಸಿದ್ದವು.

ಅಫಿಡವಿಟ್‌ನಲ್ಲಿ ಏನಿದೆ?:  ಕೇಂದ್ರ ಕಾನೂನು ಸಚಿವ ಅಶ್ವನಿಕುಮಾರ್ ಸಿಬಿಐನ ಸ್ಥಿತಿಗತಿ ವರದಿ ಪರಿಶೀಲಿಸಿದ್ದರು ಎಂಬ ವಿಚಾರವನ್ನು ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅಫಿಡವಿಟ್‌ನಲ್ಲಿ ಒಪ್ಪಿಕೊಂಡರು. ಸಿಬಿಐ ನಿರ್ದೇಶಕ  ಸಲ್ಲಿಸಿದ ಅಫಿಡವಿಟ್‌ನಲ್ಲಿ ಕಾನೂನು ಸಚಿವರು ಮತ್ತು ಪಿಎಂಒ ಮತ್ತು ಕಲ್ಲಿದ್ದಲು ಸಚಿವಾಲಯದ ಜಂಟಿ ಕಾರ್ಯದರ್ಶಿಗಳು ಸೂಚಿಸಿದಂತೆ ವರದಿಯಲ್ಲಿ ಬದಲಾವಣೆ ಮಾಡಲಾಯಿತೇ ಎಂಬ ಬಗ್ಗೆ ಯಾವುದೇ ಪ್ರಸ್ತಾವನೆ ಮಾಡಲಾಗಿಲ್ಲ.

ಸುಪ್ರೀಂನ ಹಿರಿಯ ವಕೀಲ ಕೆ.ಎನ್.ಭಟ್ ಪ್ರಕಾರ ಕೇಂದ್ರ ಸರ್ಕಾರದ ವಿರುದ್ಧವೇ ಆರೋಪಗಳು ಕೇಳಿ ಬಂದಿರುವುದರಿಂದ ತನಿಖೆ ನಡೆಸುತ್ತಿರುವ ಸಂಸ್ಥೆಯ ಅಧಿಕಾರಿಗಳನ್ನು ಸಚಿವರು ಕರೆಯಿಸಿಕೊಂಡು ವರದಿ ಪರಿಶೀಲಿಸಿದ್ದು ಸರಿಯಲ್ಲ. ಇದು ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದಂತೆ ಎಂದಿದ್ದಾರೆ.

ಸಿಬಿಐ ನಿರ್ದೇಶಕ ರಂಜಿತ್  ಸಿನ್ಹಾ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ' ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೆ ತನಿಖೆಯ ವರದಿಯನ್ನು ಯಾವುದೇ ರಾಜಕೀಯ ವ್ಯಕ್ತಿ ಜತೆ ಹಂಚಿಕೊಳ್ಳುವುದಿಲ್ಲ' ಎಂದು ವಾಗ್ದಾನ ಮಾಡಿದರು. ಇದರ ಜತೆಗೆ ಸುಪ್ರೀಂಕೋರ್ಟ್‌ಗೆ ಶುಕ್ರವಾರ ಸಲ್ಲಿಕೆಯಾಗಿರುವ ವರದಿ ಯಾವುದೇ ರಾಜಕೀಯ ವ್ಯಕ್ತಿ ಜತೆ ಹಂಚಿಕೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ.

ಆದಾಗ್ಯೂ, ಸಚಿವರ ರಾಜಿನಾಮೆಗೆ ವಿಪಕ್ಷಗಳು ಒತ್ತಾಯಿಸುತ್ತಿರುವುದರ ಬಗ್ಗೆ  ಪ್ರತಿಕ್ರಿಯೆ ನೀಡಿದ ಪ್ರಧಾನಿ, ಕಾನೂನು ಸಚಿವರು ರಾಜಿನಾಮೆ ನೀಡಬೇಕಾದಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಅದೇ ವೇಳೆ ವಿಪಕ್ಷಗಳು ಈ ವಿಷಯವನ್ನೆತ್ತಿ ಸಂಸತ್ ಕಲಾಪಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ವಿಷಾದ ವ್ಯಕ್ತ ಪಡಿಸಿದ ಸಿಂಗ್, ವಿಪಕ್ಷಗಳು ಸಂಸತ್ ಕಲಾಪವನ್ನು ಸರಾಗವಾಗಿ ನಡೆಯಲು ಸಹಕರಿಸಬೇಕು. ನಾವು ನಮ್ಮ ಸಂವಿಧಾನ ವ್ಯವಸ್ಥೆಯನ್ನು ನಗೆಪಾಟಲು ಮಾಡುತ್ತಿದ್ದೇವೆ. ಜಗತ್ತೇ ನಮ್ಮನ್ನು ನೋಡಿ ನಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement