ಪಾಕ್ ಜೈಲಲ್ಲಿ ಹಲ್ಲೆಗೊಳಗಾಗಿದ್ದ ಸರಬ್ಜಿತ್ 'ಕೋಮಾ'ಗೆ
ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ನಿನ್ನೆ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಭಾರತೀಯ ಕೈದಿ ಸರಬ್ಜಿತ್ ಸಿಂಗ್ ಈಗ 'ಕೋಮಾ'ಗೆ..
ಇಸ್ಲಾಮಾಬಾದ್/ಲಾಹೋರ್: ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ನಿನ್ನೆ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಭಾರತೀಯ ಕೈದಿ ಸರಬ್ಜಿತ್ ಸಿಂಗ್ ಈಗ 'ಕೋಮಾ'ಗೆ ಜಾರಿದ್ದು, ಅವರಿಗೆ ಕೃತಕ ಉಸಿರಾಟವನ್ನು ಅಳವಡಿಸಲಾಗಿದೆ.
ಸರಬ್ಜಿತ್ ಆರೋಗ್ಯ ಸ್ಥಿತಿ ಸ್ಥಿರವಾಗುವವರೆಗೆ ನಾವು ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ಶನಿವಾರ ಹೇಳಿದ್ದಾರೆ.
ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ 49 ವರ್ಷದ ಸರಬ್ಜಿತ್ ಸಿಂಗ್ ಮೇಲೆ ಸಹಕೈದಿಗಳಿಬ್ಬರು ಹರಿತವಾದ ವಸ್ತುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸರಬ್ಜಿತ್‌ರನ್ನು ಲಾಹೋರ್‌ನ ಜಿನ್ನಾ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಸರಬ್ಜಿತ್ ಈಗ ಕೋಮಾ ಸ್ಥಿತಿಗೆ ಜಾರಿದ್ದಾರೆ ಮತ್ತು ತೀವ್ರ ರಕ್ತಸ್ರಾವದಿಂದ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ವೈದ್ಯರಿಂದ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸರಬ್ಜಿತ್ ಮೇಲೆ ಹಲ್ಲೆ ನಡೆಸಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
1990ರಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪದ ಮೇರೆಗೆ ಸರಬ್ಜಿತ್‌ಗೆ ಗಲ್ಲುಶಿಕ್ಷೆ ವಿಧಿಸಲಾಗಿತ್ತು. ಪ್ರಕರಣದಲ್ಲಿ ನಿರ್ದೋಷಿ ಎಂದು ಹೇಳುತ್ತಲೇ ಬಂದಿರುವ ಸರಬ್ಜಿತ್ ಅವರು ಸರ್ಕಾರದಿಂದ ಕ್ಷಮಾದಾನ ಎದುರು ನೋಡುತ್ತಿದ್ದರು. ಆದರೆ, ಸಂಸತ್ತಿನ ಮೇಲಿನ ದಾಳಿಗೆ ಸಂಚು ರೂಪಿಸಿದ್ದ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದ ಬಳಿಕ ಸರಬ್ಜಿತ್ ಅವರಿಗೆ ಭದ್ರತೆ ಒದಗಿಸಲಾಗಿತ್ತು. ಭಾರತೀಯ ಕೈದಿಗಳ ಮೇಲೆ ಪಾಕ್ ಜೈಲಿನಲ್ಲಿ ಹಲ್ಲೆ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಇನ್ನೊಬ್ಬ ಕೈದಿಯನ್ನು ಜೈಲಿನಲ್ಲಿ ಬರ್ಬರವಾಗಿ ಹತ್ಯೆ ನಡೆಸಲಾಗಿತ್ತು.