ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮಂಡ್ಯದಲ್ಲಿ 10 ಅಭ್ಯರ್ಥಿ ಗೆಲ್ಲಿಸುವ ನಾಯಕ ಇದ್ದಾರೆ: ಕೃಷ್ಣ

ಮಂಡ್ಯದಲ್ಲಿ 10 ಅಭ್ಯರ್ಥಿಗಳನ್ನು ಗೆಲ್ಲಿಸುವ ನಾಯಕ ಇದ್ದಾರೆ ಎಂದು ಹೇಳುವ ಮೂಲಕ ಕೇಂದ್ರ ಮಾಜಿ..

Lingaraj Badiger
Updated On : 27 Apr 2013, 2:34 am

ಬೆಂಗಳೂರು: ಮಂಡ್ಯದಲ್ಲಿ 10 ಅಭ್ಯರ್ಥಿಗಳನ್ನು ಗೆಲ್ಲಿಸುವ ನಾಯಕ ಇದ್ದಾರೆ ಎಂದು ಹೇಳುವ ಮೂಲಕ ಕೇಂದ್ರ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ, ರೆಬಲ್ ಸ್ಟಾರ್ ಅಂಬರೀಶ್ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಶನಿವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮ ಸಂವಾದ ನಡೆಸಿದ ಕೃಷ್ಣ, ಮಂಡ್ಯದಲ್ಲಿ ಎಲ್ಲಾ ಕಡೆ ಪ್ರಚಾರ ಮಾಡಲು ನನಗೆ ಸಾಧ್ಯವಾಗಿಲ್ಲ. ಆದರೂ ಆ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ನಾಯಕರಿದ್ದಾರೆ. ನಾನೇನಿದ್ದರು ಶಕ್ತಿ ಇಲ್ಲದ ಕಡೆ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.

ಈಗ ನಾನು ಮಂಡ್ಯದ ಜವಾಬ್ದಾರಿ ಕಳಚಿಕೊಂಡಿದ್ದೇನೆ. ಈಗೇನಿದ್ದರು ನನ್ನ ಕಾರ್ಯ ಕ್ಷೇತ್ರ ಬೆಂಗಳೂರು ಎಂದು ಕೃಷ್ಣ ತಿಳಿಸಿದರು.

ನಾನು ಕೇಂದ್ರದಲ್ಲಿ ಸಚಿವ ಸ್ಥಾನ ತ್ಯಜಿಸಿದ ಬಳಿಕ ನನ್ನ ಅನುಭವವನ್ನು ಪಕ್ಷ ಕೇಳಿದ್ದರೆ ಸಲಹೆ ನೀಡಲು ಸಿದ್ಧನಾಗಿದ್ದೆ. ಆದರೆ ಯಾರೂ ಕೇಳಲಿಲ್ಲ. ನನ್ನ ಅನುಭವವನ್ನು ಕಾಂಗ್ರೆಸ್ ಬಳಸಿಕೊಳ್ಳಲಿಲ್ಲ ಎಂಬ ಬಗ್ಗೆ ನನಗೆ ಚಿಂತೆ ಇಲ್ಲ ಎಂದು ಹೇಳಿದರು.

80 ವರ್ಷವಾದ ಬಳಿಕ ಕೇಂದ್ರದಲ್ಲಿ ಯಾರೂ ಸಚಿವರಾಗಿ ಮುಂದುವರೆದಿಲ್ಲ. ಹೀಗಾಗಿ ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ನಾಲ್ಕು ದಶಕಗಳ ಕಾಲ ನಾನು ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ್ದೇನೆ. ಈಗ ಉಳಿದ ಜೀವನವನ್ನು ಟೆನಿಸ್ ಹಾಗೂ ಯೋಗದೊಂದಿಗೆ ಕಳೆಯುತ್ತೇನೆ ಎಂದರು.

ಮಂಡ್ಯ ಜಿಲ್ಲೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ತಮ್ಮನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದ ಕೃಷ್ಣ, ಚುನಾವಣಾ ಪ್ರಚಾರದಿಂದಲೇ ದೂರ ಉಳಿಯುತ್ತಾರೆ ಎನ್ನಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಎರಡು ದಿನ ಹಾಗೂ ನಿನ್ನೆ ಮಂಡ್ಯ ಜಿಲ್ಲೆಯ ಕೆಲವು ಕಡೆ ಪ್ರಚಾರ ಮಾಡುವ ಮೂಲಕ ಆ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದರು. ಇದೀಗ ಮಂಡ್ಯ ಜಿಲ್ಲೆಯ ಬಗೆಗಿನ ತಮ್ಮ ಅಸಮಾಧಾನವನ್ನು ಕೃಷ್ಣ ಇಂದು ಬಹಿರಂಗವಾಗಿಯೇ ಹೊರ ಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement