ಮೇ4,5 ರಂದು ಬಿಜೆಪಿ ಪ್ರತಿಭಟನೆಗೆ ನಿರ್ಧಾರ
2ಜಿ, ಕಲ್ಲಿದ್ದಲು ಹಗರಣ ಸೇರಿದಂತೆ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ವಿರುದ್ಧ ಭಾರತೀಯ ಜನತಾ ಪಕ್ಷ(ಬಿಜೆಪಿ) ಮೇ 4...
ನವದೆಹಲಿ: 2ಜಿ, ಕಲ್ಲಿದ್ದಲು ಹಗರಣ ಸೇರಿದಂತೆ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ವಿರುದ್ಧ ಭಾರತೀಯ ಜನತಾ ಪಕ್ಷ(ಬಿಜೆಪಿ) ಮೇ 4 ಮತ್ತು 5ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
2ಜಿ,ಕಲ್ಲಿದ್ದಲು ಹಗರಣ ಮತ್ತು ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವೇಡ್‌ಕರ್ ಭಾನುವಾರ ಹೇಳಿದ್ದಾರೆ.
ಕಾಂಗ್ರೆಸ್ ಅನೇಕ ಹಗರಣಗಳಲ್ಲಿ ಮುಳುಗಿದೆ. ಪ್ರಧಾನಿ ಮಂತ್ರಿ ಮನಮೋಹನ್ ಸಿಂಗ್ ಅವರು ಕಾನೂನು ಸಚಿವರನ್ನು ಬಳಸಿಕೊಂಡು, ತಮ್ಮ ಇಚ್ಚೆಯಂತೆ ಕಾನೂನನ್ನು ತಿದ್ದುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ದೇಶವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ ಎಂದು ದೂರಿದ್ದಾರೆ.
ಹಗರಣಗಳಲ್ಲಿ ಮುಳುಗಿರುವ ಕಾಂಗ್ರೆಸ್ ದಾಖಲೆಗಳನ್ನು ನಾಶಪಡಿಸುತ್ತಿದೆ. ಕಾನೂನನ್ನು ದುರುಪಯೋಗ ಪಡಿಸಿಕೊಂಡು ಜನರನ್ನು ವಂಚಿಸುತ್ತಿದೆ. ಭ್ರಷ್ಟರಿಗೆ ರಕ್ಷಣೆ ನೀಡುತ್ತಿರುವ ಕಾಂಗ್ರೆಸ್, ಅಧಿಕಾರಿಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದೆ.
ಇದಲ್ಲದೇ ಹಗರಣಗಳ ಸಂಬಂಧ ಸಿಬಿಐ ಸಲ್ಲಿಸಿರುವ ವರದಿ ಏನಾಯ್ತು? ಈ ಬಗ್ಗೆ ಪ್ರಧಾನ ಮಂತ್ರಿ ಕಛೇರಿಯ ಜಂಟಿ ಕಾರ್ಯದರ್ಶಿಗಳು ಉತ್ತರಿಸಬೇಕು ಎಂದು ಪ್ರಕಾಶ್ ಜಾವೇಡ್‌ಕರ್ ಸವಾಲು ಹಾಕಿದ್ದಾರೆ.
ಕಾಂಗ್ರೆಸ್‌ನ ಈ ಧೋರಣೆಯನ್ನು ಖಂಡಿಸಿ ಪ್ರತಿಭಟನೆಗೆ ನಿರ್ಧರಿಸಿದ್ದು, ಪ್ರತಿಯೊಬ್ಬ ನಾಗರಿಕರಿಗೆ ಕಾಂಗ್ರೆಸ್ ಧೋರಣೆ ಬಗ್ಗೆ ಮನದಟ್ಟು ಮಾಡಿಕೊಟ್ಟು ಅನ್ಯಾಯದ ವಿರುದ್ದ ಧನಿ ಎತ್ತಲಿದೆ ಎಂದು ಅವರು ಹೇಳಿದ್ದಾರೆ.