ಕಲ್ಲಿದ್ದಲು ಹಗರಣ: ಸರ್ಕಾರದ ಹಸ್ತಕ್ಷೇಪಕ್ಕೆ ಸುಪ್ರೀಂ ಕಿಡಿ
ಕಲ್ಲಿದ್ದಲು ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಕೇಂದ್ರ ಸರ್ಕಾರದೊಂದಿಗೆ ತನಿಖಾ ವರದಿಯ ಮಾಹಿತಿ ಹಂಚಿಕೆ ಬಗ್ಗೆ ..
ನವದೆಹಲಿ: ಕಲ್ಲಿದ್ದಲು ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಕೇಂದ್ರ ಸರ್ಕಾರದೊಂದಿಗೆ ತನಿಖಾ ವರದಿಯ ಮಾಹಿತಿ ಹಂಚಿಕೊಂಡ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮಂಗಳವಾರ ಸಿಬಿಐ ವರ್ತನೆ ಬಗ್ಗೆಯೂ ಕೋರ್ಟ್ ಕಿಡಿ ಕಾರಿದೆ.
ಸಿಬಿಐ ಸಲ್ಲಿಸಿದ್ದ ಅಫಿಡವಿಟ್ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಮಾಹಿತಿ ಹಂಚಿಕೆಯಿಂದ ಇಡೀ ಪ್ರಕ್ರಿಯೆಗೆ ಧಕ್ಕೆಯಾಗಿದೆ. ಇದರಿಂದ ಸಿಬಿಐ ಮೇಲಿಟ್ಟಿದ್ದ ವಿಶ್ವಾಸಕ್ಕೂ ತೀವ್ರ ಧಕ್ಕೆಯಾಗಿದೆ ಎಂದು ಹೇಳಿದೆ.
ಸರ್ಕಾದೊಂದಿಗೆ ತನಿಖಾ ವರದಿಯ ಮಾಹಿತಿ ಹಂಚಿಕೊಳ್ಳುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ್ನು ಕತ್ತಲಲ್ಲಿ ಇಟ್ಟಿದ್ದೇಕೆ ಎಂದು ಕೋರ್ಟ್ ಖಾರವಾಗಿಯೇ ಪ್ರಶ್ನಿಸಿದೆ. ಮೊದಲು ರಾಜಕೀಯ ಹಸ್ತಕ್ಷೇಪದಿಂದ ಸಿಬಿಐಯನ್ನು ಮುಕ್ತಗೊಳಿಸಬೇಕಿದೆ ಎಂದು ಅಭಿಪ್ರಾಯ ಪಟ್ಟಿರುವ ಕೋರ್ಟ್, ಸಿಬಿಐ ಕೇಂದ್ರ ಸರ್ಕಾರದ ಪ್ರಭಾವಕ್ಕೆ ಒಳಗಾಗಬಾರದು ಎಂದು ಸೂಚಿಸಿದೆ.
ಮಾಹಿತಿ ಹಂಚಿಕೆ ಸಂಬಂಧ ಕಳೆದ ವಾರ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರು. ಈ ಅಫಿಡವಿಟ್‌ನಲ್ಲಿ ವರದಿಯನ್ನು ಕಾನೂನು ಸಚಿವರು ಮತ್ತು ಪಿಎಂಒ ಹಾಗೂ ಕಲ್ಲಿದ್ದಲು ಸಚಿವಾಲಯದ ಜಂಟಿ ಕಾರ್ಯದರ್ಶಿಗಳು ಪರಿಶೀಲಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದರು.