ಕಲ್ಲಿದ್ದಲು ಹಗರಣದ ತನಿಖಾ ವರದಿಯಲ್ಲಿ ಬದಲಾವಣೆ ಮಾಡಲಾಗಿದೆ: ಸಿಬಿಐ
ನವದೆಹಲಿ: ಕಲ್ಲಿದ್ದಲು ಹಗರಣದ ತನಿಖಾ ವರದಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ ಗೆ ಎಲ್ಲ ವಿವರ ನೀಡಿರುವುದಾಗಿ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ಮಂಗಳವಾರ ಹೇಳಿದ್ದಾರೆ.
ತನಿಖಾ ವರದಿಯ ಕರಡು ಪ್ರತಿಯ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಸಿನ್ಹಾ, ಪ್ರಗತಿ ತನಿಖಾ ವರದಿಯ ಮೂಲ ಪ್ರತಿ ಹಾಗು ತಿದ್ದುಪಡಿ ಮಾಡಿರುವ ವರದಿಯ ಬಗ್ಗೆ ಎಲ್ಲ ವಿವರವನ್ನು ಕೋರ್ಟ್ ಗೆ ನೀಡಿದ್ದೇವೆ ಎಂದು ತಿಳಿಸಿದರು.
ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಕೇಳುವ ಎಲ್ಲ ವಿವರಗಳನ್ನು ತಾವು ಮೇ 6ರಂದು ಅಫಿಡವಿಟ್ನಲ್ಲಿ ಸಲ್ಲಿಸುವುದಾಗಿ ಎಂದು ಸಿನ್ಹಾ ಹೇಳಿದರು.
ಕಲ್ಲಿದ್ದಲು ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಕೇಂದ್ರ ಸರ್ಕಾರದೊಂದಿಗೆ ತನಿಖಾ ವರದಿಯ ಮಾಹಿತಿ ಹಂಚಿಕೊಂಡ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮಂಗಳವಾರ ಸಿಬಿಐ ವರ್ತನೆ ಬಗ್ಗೆಯೂ ಕೋರ್ಟ್ ಕಿಡಿಕಾರಿತ್ತು.