ಬಿಸಿಸಿಐ ಕಾರ್ಯಕಾರಿ ಸಭೆ ರದ್ದು, ದಾಲ್ಮಿಯಾ ಮುಂದುವರಿಕೆ
ನವದೆಹಲಿ: ಮತ್ತೆ ಬಿಸಿಸಿಐ ಅಧ್ಯಕ್ಷರಾಗಿ ಮುಂದೂವರೆಯಲು ಹವಣಿಸುತ್ತಿರುವ ಎನ್. ಶ್ರೀನಿವಾಸನ್ ಅವರಿಗೆ ಭಾರಿ ಹಿನ್ನಡೆಯಾಗಿದೆ. ಅಧ್ಯಕ್ಷರಾಗಿ ಶ್ರೀನಿವಾಸ್ ಅವರ ಮುಂದುವರಿಕೆಗೆ ಕಾರ್ಯಕಾರಿ ಸಮಿತಿಯ ಕೆಲ ಸದಸ್ಯರ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸದ್ಯಕ್ಕೆ ಬಿಸಿಸಿಐ ಕಾರ್ಯಕಾರಿ ಸಮಿತಿಯನ್ನೇ ರದ್ದು ಮಾಡಲಾಗಿದೆ. ಹೀಗಾಗಿ ತಾತ್ಕಾಲಿಕವಾಗಿ ಬಿಸಿಸಿಐ ಹಂಗಾಮಿ ಅಧ್ಯಕ್ಷರಾಗಿ ಜಗಮೋಹನ್ ದಾಲ್ಮಿಯ ಅವರೇ ಮುಂದುವರೆಯಲ್ಲಿದ್ದಾರೆ.
ಶ್ರೀನಿವಾಸ್‌ನ್ ಅವರನ್ನು ಮತ್ತೆ ಅಧ್ಯಕ್ಷರಾಗಿ ಮುಂದುವರೆಸುವ ಸಂಬಂಧ ಚರ್ಚಿಸಲು ಇಂದು ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿತ್ತು. ಆದರೆ ಸಭೆಯಲ್ಲಿ ಆಂತರಿಕ ಬಿಕ್ಕಟ್ಟು ಎದುರಾಗಿದ್ದರಿಂದ ಸಭೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಬೇಕಾಯಿತು ಎಂದು ದಾಲ್ಮಿಯ ತಿಳಿಸಿದ್ದಾರೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದ ಕುರಿತು ತನಿಖೆ ನಡೆಸಲು ಬಿಸಿಸಿಐ ರಚಿಸಿದ್ದ ಇಬ್ಬರು ಸದಸ್ಯರ ಸಮಿತಿ ಅದರ ನಿಯಮಕ್ಕೆ ವಿರುದ್ಧವಾಗಿದೆ ಎಂದು ಬಾಂಬೆ ಹೈಕೋರ್ಟ್ ಬುಧವಾರ ಹೇಳಿತ್ತು. ಅಲ್ಲದೆ ಬಿಸಿಸಿಐನ ನಿಯಮದ ಪ್ರಕಾರವೇ ಈ ಸಮಿತಿ 'ಕಾನೂನು ಮತ್ತು ಸಂವಿಧಾನಬಾಹಿರವಾಗಿದೆ' ಎಂದಿತ್ತು.