ಆಂಧ್ರ ಸರ್ಕಾರಿ ನೌಕರರು ತೆಲಂಗಾಣ ತೊರೆಯಬೇಕು: ಕೆಸಿಆರ್
ಹೈದರಾಬಾದ್: ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿರುವುದರಿಂದ. ತೆಲಂಗಾಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ತೆಲಂಗಾಣೇತರ ಸರ್ಕಾರಿ ನೌಕರರು ತೆಲಂಗಾಣ ತೊರೆಯಬೇಕು ಎಂದು ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ಟಿಡಿಪಿ ಹಾಗೂ ಇತರೆ ರಾಜಕೀಯ ಪಕ್ಷಗಳ ಟೀಕೆಗೆ ಗುರಿಯಾಗಿದೆ.
ತೆಲಂಗಾಣ ಪರ ನೌಕರರನ್ನು ಉದ್ದೇಶಿಸಿ ಮಾತನಾಡಿದ ಕೆಸಿಆರ್, ಖಂಡಿತ ಅವರು(ತೆಲಂಗಾಣೇತರ ನೌಕರರು) ಆಂಧ್ರಕ್ಕೆ ತೆರಳಬೇಕು. ಅವರಿಗೆ ಬೇರೆ ಮಾರ್ಗ ಇಲ್ಲ. ಆ ಪ್ರದೇಶದ ನೌಕರರಿಂದಲೇ ಆಂಧ್ರ ಸರ್ಕಾರ ಅಲ್ಲಿ ಆಡಳಿತ ನಡೆಸಬೇಕು. ಅಲ್ಲಿನ ಸರ್ಕಾರದಲ್ಲಿ ಅವರು ಕೆಲಸ ಮಾಡಲಿ, ಇಲ್ಲಿನ ಸರ್ಕಾರದಲ್ಲಿ ನಮ್ಮ ತೆಲಂಗಾಣ ಪ್ರದೇಶದ ನೌಕರರು ಕೆಲಸ ಮಾಡುತ್ತಾರೆ ಎಂದು ಹೇಳಿದರು.
ನೂತನ ರಾಜ್ಯ ರಚನೆಯ ನಂತರ ಕೆಳ ಹಂತದಿಂದ ಎಲ್ಲ ಸ್ಥಾನಗಳಲ್ಲೂ ನಮ್ಮ ಜನತೆಗೆ ಬಡ್ತಿ ಸಿಗಬೇಕು ಮತ್ತು ತೆರವುಗೊಳ್ಳುವ ಎಲ್ಲ ಹುದ್ದೆಗಳನ್ನು ಭರ್ತಿಮಾಡಬೇಕು ಎಂದರು.