ಎಚ್ಡಿಕೆ ತಮ್ಮ ಸ್ವಾರ್ಥಕ್ಕಾಗಿ ಚುನಾವಣೆ ತಂದ್ರು; ಸಿಎಂ
ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ವಿರುದ್ಧ...
ರಾಮನಗರ: ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಚ್ಡಿಕೆ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಸ್ವಾರ್ಥಕ್ಕಾಗಿ ಈ ಉಪ ಚುನಾವಣೆ ಎದುರಾಗಿದೆ ಎಂದು ಶನಿವಾರ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್ ಅವರು ಇಂದು ರಾಮನಗರ ಜಿಲ್ಲಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸಿಎಂ, ಅನಗತ್ಯವಾಗಿ ಈ ಉಪ ಚುನಾವಣೆ ಎದುರಾಗಿದೆ. ಕುಮಾರಸ್ವಾಮಿ ಅವರು ಸಿಎಂ ಆಗುವ ಆಸೆಯಿಂದ ಸಂಸತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದರು. ಅವರು ಸಂಸದರಾಗಿದ್ದ ವೇಳೆ ಸಂಸತ್ನಲ್ಲಿ ಒಂದು ದಿನವೂ ರಾಜ್ಯದ ಪರ ಧ್ವನಿ ಎತ್ತಲಿಲ್ಲ ಎಂದರು.
ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಿದ ಸಿಎಂ, ಎಚ್ಡಿಕೆ ಕುಟುಂಬ ನೇರ ರಾಜಕಾರಣ ಮಾಡುವುದನ್ನು ಕಲಿತಿಲ್ಲ ಮತ್ತು ಈ ಕ್ಷೇತ್ರಕ್ಕೆ ದೇವೇಗೌಡರ ಕೊಡುಗೆ ಶೂನ್ಯ ಎಂದು ಸಿದ್ದು ವಾಗ್ದಾಳಿ ನಡೆಸಿದರು.